

ಪ್ರಮುಖ ಮುಖ್ಯಾಂಶಗಳು
ಖರೀದಿ, ಆಸ್ಪತ್ರೆ, ಬ್ಯಾಂಕ್ ವ್ಯವಹಾರ ಇತರ ಕಾರ್ಯಗಳಿಗೆ 7 ಕಿ.ಮೀ ದೂರದ ಬಿ.ಜಿ. ಕೆರೆ, 12 ಕಿ.ಮೀ ದೂರದ ಕೊಂಡ್ಲಹಳ್ಳಿ, 18 ಕಿ.ಮೀ ಅಂತರದಲ್ಲಿರುವ ನಾಯಕನಹಟ್ಟಿಗೆ ಹೋಗುವ ಅನಿವಾರ್ಯತೆ ಇವರದ್ದು.
ಮಕ್ಕಳು ಹೆಚ್ಚಿನ ವಿದ್ಯಾಭ್ಯಾಸಕ್ಕೆ 5 ಕಿ.ಮೀ ದೂರದ ಮುಸ್ತರಗುಮ್ಮಿ, 4 ಕಿ.ಮೀ ದೂರದ ಅಬ್ಬೇನಹಳ್ಳಿಗೆ ತೆರಳಬೇಕಿದೆ. ವಾಹನ ಸೌಲಭ್ಯವಿಲ್ಲದೆ ನಿತ್ಯ ಕಾಲ್ನಡಿಗೆಯಲ್ಲೇ ಹೋಗಬೇಕಾಗಿದೆ.
ಚೌಳಕೆರೆ ಗ್ರಾಮದಿಂದ ಮುಸ್ತರಗುಮ್ಮಿಗೆ ಹೋಗುವ ದಾರಿ ಮುಳ್ಳು ಗಿಡಗಂಟಿಗಳಿಂದ ಕೂಡಿದೆ. ಕಾಲ್ನಡಿಗೆಯಲ್ಲಿ ತೆರಳುವುದು ಕಷ್ಟಕರ. ಚೌಳಕೆರೆಯಿಂದ ಎಲ್ಲ ಕಡೆಗಳಿಗೆ ತೆರಳಲು ಬಸ್, ಆಟೋರಿಕ್ಷಾಗಳ ಸೌಕರ್ಯಗಳಿಲ್ಲ.
ಹಳ್ಳಿಗಳಲ್ಲಿ ಬಸ್ಸಿಲ್ಲದಿದ್ದರೂ ಆಟೋರಿಕ್ಷಾದಂತಹ ಲಘುವಾಹನಗಳಾದರೂ ಇರುತ್ತವೆ. ಆದರೆ, ಈ ಗ್ರಾಮಸ್ಥರಿಗೆ ಅಂತಹ ಅನುಕೂಲಗಳೂ ಇಲ್ಲವೇ ಇಲ್ಲ. ಆಸ್ಪತ್ರೆ ಇತರ ತುರ್ತು ಅಗತ್ಯಗಳಿಗೆ ತೆರಳುವಾಗ ಗ್ರಾಮಸ್ಥರ ಪಾಡು ದೇವರಿಗೇ ಪ್ರೀತಿ.
"ಕೆಲ ವರ್ಷಗಳ ಹಿಂದೆ ಮಾಡಿದ ಮನವಿಗೆ ಬಸ್ಸೊಂದು ಗ್ರಾಮಕ್ಕೆ ಮೂರು ದಿನ ಬಂದಿದ್ದು ಬಿಟ್ಟರೆ ನಾಲ್ಕನೇ ದಿನ ಅದರ ಸುಳಿವೇ ಇಲ್ಲದಂತಾಯಿತು. ಬಸ್ ಸೌಕರ್ಯಕ್ಕಾಗಿ ಮನವಿ ಮಾಡುತ್ತಲೇ ಇದ್ದರೂ ಯಾವುದೇ ಪ್ರಯೋಜನವಾಗಿಲ್ಲ," ಎನ್ನುತ್ತಾರೆ ಗ್ರಾಮಸ್ಥರು. ಸ್ವಾತಂತ್ರ್ಯ ಬಂದು ಎಂಟು ದಶಕಗಳು ಕಳೆಯುತ್ತಿದ್ದರೂ ಈ ಗ್ರಾಮಸ್ಥರಿಗೆ ಬಸ್ ಸೌಲಭ್ಯ ಇಲ್ಲದೇ ಇರುವುದು ದುರ್ದೈವದ ಸಂಗತಿ.
ನಾಯಕನಹಟ್ಟಿಯಿಂದ ಅಬ್ಬೇನಹಳ್ಳಿ, ಮಲ್ಲೂರಹಳ್ಳಿ, ಚೌಳಕೆರೆ, ಮುಸ್ತರಗುಮ್ಮಿ, ಸೂರಮ್ಮನಹಳ್ಳಿ, ಬಿ.ಜಿ. ಕೆರೆ ಮಾರ್ಗದಲ್ಲಿ ಬಸ್ ಸೌಕರ್ಯ ಒದಗಿಸಬಹುದಾಗಿದೆ. ಇದು ಚಳ್ಳಕೆರೆ ತಾಲೂಕಿನ ಗಡಿಗ್ರಾಮವಾಗಿದ್ದು, ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಸೇರಿದೆ. ಅತ್ತ ಚಳ್ಳಕೆರೆ, ಇತ್ತ ಮೊಳಕಾಲ್ಮೂರು ತಾಲೂಕು ಆಡಳಿತಗಳಿಂದಲೂ ಗ್ರಾಮ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂಬುದು ಗ್ರಾಮಸ್ಥರ ಅಳಲಾಗಿದೆ.
ಹೆಣ್ಣು ಮಕ್ಕಳು ಗ್ರಾಮದಿಂದ ಪ್ರೌಢಶಾಲೆಗೆ ಭಯದಲ್ಲೇ ಹೋಗುವಂತಹ ಸ್ಥಿತಿ ಇದೆ. ನಿತ್ಯ ಆತಂಕದಲ್ಲೇ ಮಕ್ಕಳನ್ನು ಪ್ರೌಢಶಾಲಾ ವ್ಯಾಸಂಗಕ್ಕೆ ಕಳುಹಿಸುವ ಪರಿಸ್ಥಿತಿ ಪಾಲಕರದ್ದು. ಕೆಎಸ್‌ಆರ್‌ಟಿಸಿ ಬಸ್ ಸೌಲಭ್ಯ ಕಲ್ಪಿಸಿದರೆ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುತ್ತದೆ.