ನಾಲೆ ಒಡೆಯದಂತೆ ಸಿಸಿ ಕ್ಯಾಮರಾ ಕಣ್ಣು

ಟಿಎನ್ ಕೋಟೆ ರೈತರು ನಾಲೆ ಒಡೆದು ನೀರು ಹರಿಸಿಕೊಳ್ಳುವ ಆರೋಪ
CCTV cameras
ಟಿಎನ್ ಕೋಟೆ ಬಕನಾಲೆ ಬಳಿ ವಿದ್ಯುತ್ ಕಂಬಗಳಿಗೆ ಸಿಸಿ ಕ್ಯಾಮರಾ ಅಳವಡಿಸುತ್ತಿರುವುದು.CCTV cameras
Published on: 

ಪರಶುರಾಮಪುರ: ಸಮೀಪದ ತಿಮ್ಮಣ್ಣ ನಾಯಕನ ಕೋಟೆ ಗ್ರಾಮದ ಹೊರವಲಯದ ಬಳಿ ಹಾದು ಹೋಗಿರುವ ಬಲನಾಲೆ ಬಳಿ ನಾಲೆ ಒಡೆಯದಂತೆ ಹದ್ದಿನ ಕಣ್ಣಿಡಲು ಶುಕ್ರವಾರ ತಾಲೂಕು ಆಡಳಿತ, ಚಿತ್ರದುರ್ಗ ಸಣ್ಣ ನೀರಾವರಿ ಇಲಾಖೆ ಸಹಯೋಗದಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ.

ಕಳೆದ ಹಲವು ದಿನಗಳಿಂದ ಪರಶುರಾಮಪುರ ಮತ್ತು ಟಿಎನ್ ಕೋಟೆ ಗ್ರಾಮಗಳ ರೈತರ ನಡುವೆ ಬಲನಾಲೆಯ ನೀರಿನ ವಿಚಾರವಾಗಿ ವಾಗ್ವಾದ ನಡೆದು, ರೈತರು ಪರಶುರಾಮಪುರ ಬಂದ್ ಮಾಡುವ ಹಂತಕ್ಕೆ ತಲುಪಿದ್ದರು. ಇದನ್ನು ಗಮನಿಸಿದ ಚಳ್ಳಕೆರೆ ತಾಲೂಕು ಆಡಳಿತ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಚಿತ್ರದುರ್ಗ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಸಿಸಿ ಕ್ಯಾಮರಾ ಅಳವಡಿಸಿದ್ದಾರೆ.

ಪ್ರತೀ ವರ್ಷವೂ ಭದ್ರಾ ಮೇಲ್ದಂಡೆ ಯೋಜನೆಯಡಿ ವಿವಿ ಸಾಗರದ ನೀರನ್ನು ವೇದಾವತಿ ನದಿಗೆ ಬಿಡುವ ವೇಳೆ ಶಿಡ್ಲಯ್ಯನಕೋಟೆ ಬಳಿಯ ಬ್ಯಾರೇಜ್‌ನಿಂದ ಎಡ ಮತ್ತು ಬಲ ನಾಲೆಗೆ ನೀರುಣಿಸುವುದು ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ. ಇಲಾಖೆಯವರು ಬಲ ನಾಲೆಯ ಮೂಲಕ ಹರಿದು ಬರುವ ನೀರನ್ನು ಟಿಎನ್ ಕೋಟೆ, ಗೋಸಿಕೆರೆ, ಚೌಳೂರು ಮತ್ತು ಪರಶುರಾಮಪುರದ ರೈತರು ವೈಜ್ಞಾನಿಕವಾಗಿ ನಾಲೆಯಲ್ಲಿ ಅಳವಡಿಸಿರುವ ತೂಬಿನ ಮೂಲಕವೇ ನೀರು ಅವರ ಕೆರೆಗಳಿಗೆ ಹರಿಸಿಕೊಳ್ಳಬೇಕು ಎಂಬ ನಿಯಮವಿದೆ.

ಆದರೆ,ಟಿಎನ್ ಕೋಟೆ ಬಳಿ ಗ್ರಾಮದ ಕೆಲವರು ಪ್ರತಿವರ್ಷವೂ ನೀರು ಹರಿಯುವ ವೇಳೆ ಅಲ್ಲಿನ ಬಲನಾಲೆ ಒಡೆದು ಹಾಕಿ ಬರುವ ಎಲ್ಲ ನೀರನ್ನು ಟಿಎನ್ ಕೋಟೆ ಕೆರೆಗೆ ಬಿಟ್ಟುಕೊಳ್ಳುತ್ತಿದ್ದರು ಎಂಬ ಆರೋಪವನ್ನು ಪರಶುರಾಮಪುರ ರೈತರು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪರಶುರಾಮಪುರ, ಚೌಳೂರು, ಗೋಸಿಕೆರೆ ಗ್ರಾಮಗಳ ರೈತರು ಸ್ಥಳಕ್ಕೆ ತೆರಳಿ ಪ್ರತಿಭಟಿಸಿ, ಒಡೆದ ನಾಲೆಯನ್ನು ಮರಳಿನ ಚೀಲ ಹಾಕಿ ಮುಚ್ಚಿದ್ದರು. ಇದು ತಾಲೂಕು ಆಡಳಿತಕ್ಕೆ ತಲೆ ನೋವಾಗಿ ಪರಿಣಮಿಸಿತ್ತು. ಇದಕ್ಕೆ ಪರಿಹಾರ ಕಂಡುಕೊಂಡಂತೆ ನಾಲೆಯ ಬಳಿ ಸಿಸಿ ಕ್ಯಾಮರಾ ಅಳವಡಿಸಿ, ಯಾರೂ ಮತ್ತೆ ನಾಲೆ ಒಡೆಯದಂತೆ ಕ್ರಮ ವಹಿಸಲು ಹದ್ದಿನ ಕಣ್ಣಿಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net