ಚಿತ್ರದುರ್ಗ ತಾಲೂಕಿನ ಸೀಬಾರದಲ್ಲಿ ಭಾನುವಾರ ಏರ್ಪಡಿಸಿದ್ದ ಡಾ.ಬಾಬು ಜಗಜೀವನರಾಂ ಅವರ ಜನ್ಮ ದಿನಾಚರಣೆಯಲ್ಲಿ ಎಚ್.ಆಂಜನೇಯ, ಬಿ.ಎನ್.ಚಂದ್ರಪ್ಪ, ಅನಿಲ್‌ಕೋಟಿ, ಚೇತನ್ ಬೋರೇಹಳ್ಳಿ ಇದ್ದರು.
ಚಿತ್ರದುರ್ಗ: ಡಾ.ಬಿ.ಆರ್.ಅಂಬೇಡ್ಕರ್ ಅವರ ನಿಧನದ ಬಳಿಕ ಶೋಷಿತರು, ಅಸ್ಪÈಶ್ಯರು, ದುರ್ಬಲರಲ್ಲಿ ಮನೆ ಮಾಡಿದ್ದ ಅನಾಥ ಪ್ರಜ್ಞೆ ದೂರಗೊಳಿಸಿ, ಅವರನ್ನು ಪ್ರಗತಿಯತ್ತ ಕೊಂಡೊಯ್ಯಲು ಶ್ರಮಿಸಿದ ಮಹಾನ್‌ನಾಯಕ ಬಾಬು ಜಗಜೀವನರಾಂ ಎಂದು ಮಾಜಿ ಸಚಿವ ಎಚ್. ಆಂಜನೇಯ ಹೇಳಿದರು.
ಸೀಬಾರದ ತಮ್ಮ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ಬಾಬೂಜಿ ಜನ್ಮ ದಿನಾಚರಣೆಯಲ್ಲಿ ಮಾತನಾಡಿ, ೧೯೫೬ರಲ್ಲಿ ಅಂಬೇಡ್ಕರ್ ಅಗಲಿಕೆಯಿಂದಾಗಿ ದೇಶದ ಪರಿಶಿಷ್ಟ ಸಮುದಾಯದ ಜನರಲ್ಲಿ ಕತ್ತಲು ಆವರಿಸಿತ್ತು. ಆಗ ಕೇಂದ್ರದಲ್ಲಿ ಮಂತ್ರಿ ಯಾಗಿದ್ದ ಬಾಬೂಜಿ ಸಂವಿಧಾನದ ಆಶಯಗಳನ್ನು ಸಮರ್ಥವಾಗಿ ಅನುಷ್ಠಾನಗೊಳಿಸಿ ಜನರ ಮನಗೆದ್ದು ನಿಜನಾಯಕರಾದರು.
ಮೀಸಲಾತಿ ಅನುಷ್ಠಾನದೊಂದಿಗೆ ರೈಲ್ವೆ ಸೇರಿ ವಿವಿಧ ಇಲಾಖೆಯಲ್ಲಿ ಬಡ್ತಿ ಮೀಸಲಾತಿ ಸೌಲಭ್ಯ ಕಲ್ಪಿಸಿ ಶೋಷಿತರ ಬದುಕಿನಲ್ಲಿ ಆಶಾ ಕಿರಣವಾಗಿ ವಿಜೃಂಭಿಸಿದರು. ಉಪ ಪ್ರಧಾನಿಯಾಗಿ ದೇಶದ ಗಮನವನ್ನು ತನ್ನೆಡೆಗೆ ಸೆಳೆದು ದಕ್ಷ ಆಡಳಿತಗಾರ ಎನಿಸಿದರು.
ಉತ್ತಮ ಸಂಸದೀಯ ಪಟು, ಸೋಲಿಲ್ಲದ ಸರದಾರ ಎನಿಸಿದ್ದ ಇವರು, ದೇಶದಲ್ಲಿ ಆಹಾರದ ಕೊರತೆ ಎದುರಾಗಿದ್ದಾಗ ಹಸಿರು ಕ್ರಾಂತಿಯ ಮೂಲಕ ಹಸಿವು ನೀಗಿದ ಮಹಾತ್ಮರು ಎಂದರು.
ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಮಾತನಾಡಿ, ಅಂಬೇಡ್ಕರ್ ಮತ್ತು ಬಾಬು ಜಗಜೀವನರಾಂ ದೇಶದ ಎರಡು ಕಣ್ಣುಗಳಿದ್ದಂತೆ ಅವರನ್ನು ನಾವು ಪ್ರತ್ಯೇಕವಾಗಿ ನೋಡಲು ಸಾಧ್ಯವೇ ಇಲ್ಲ. ಇಬ್ಬರ ಚಿಂತನೆಯೂ ದೇಶ ಮತ್ತು ದಲಿತೋದ್ಧಾರವಾಗಿತ್ತು ಎಂದರು. ಮುಖAಡರಾದ ಅನಿಲ್‌ಕೋಟಿ, ಚೇತನ್ ಬೋರೇನಹಳ್ಳಿ ಇತರರಿದ್ದರು.