ಚಳ್ಳಕೆರೆ:ನಿವೇಶನ ಹಕ್ಕುಪತ್ರಕ್ಕಾಗಿ ಪ್ರತಿಭಟನೆ ನಡೆಸುತ್ತಿರುವ ಗೋಸಿಕೆರೆ ಗ್ರಾಮಸ್ಥರನ್ನು ಅಧಿಕಾರಿಗಳು ಬೆದರಿಸಿ, ಹೋರಾಟ ಹತ್ತಿಕ್ಕುವ ಪ್ರಯತ್ನ ಮಾಡಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ. ಕುಮಾರಸ್ವಾಮಿ ಆರೋಪಿಸಿದರು.
ನಗರದ ತಾಪಂ ಕಚೇರಿ ಮುಂದೆ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಗೋಸಿಕೆರೆ ಗ್ರಾಮಸ್ಥರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡು ಸೋಮವಾರ ಮಾತನಾಡಿದರು.
ಗೋಸಿಕೆರೆ ಗ್ರಾಮದ ಅರ್ಹರಿಗೆ ನಿವೇಶನ ಹಂಚಿಕೆ ಮಾಡಲು ಈಗಾಗಲೇ ಭೂಮಿ ಮಂಜೂರಾತಿ ನೀಡಲಾಗಿದೆ ಎನ್ನುವ ಅಧಿಕಾರಿಗಳು ಇದುವರೆಗೂ ಫಲಾನುಭವಿಗಳಿಗೆ ನಿವೇಶನಗಳನ್ನು ಹಸ್ತಾಂತರ ಮಾಡಿಲ್ಲ. ನಿವೇಶನ ಭೂಮಿಯನ್ನು ಬಡಾವಣೆ ಆಗಿ ಪರಿವರ್ತನೆ ಮಾಡಿಲ್ಲ. ಇದರಿಂದ ಬೇಸತ್ತ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ತಿಳಿಸಿದರು.
ಜನರ ಸಮಸ್ಯೆ ಬಗೆಹರಿಸಬೇಕಾದ ಅಧಿಕಾರಿಗಳು ಪ್ರತಿಭಟನೆ ಹಿಂಪಡೆಯಬೇಕು. ಪ್ರತಿಭಟನೆ ನಡೆಸುವ ಜಾಗ ಇದಲ್ಲ. ಇದು ಕಚೇರಿ ಜಾಗ ಎಂದು ಹೇಳಿರುವುದನ್ನುಬ ತೀವ್ರವಾಗಿ ಖಂಡಿಸುತ್ತೇವೆ. ಕೂಡಲೇ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಬೇಕು ಎಂದು ಆಗ್ರಹಿಸಿದರು.
ದಸಂಸ ರಾಜ್ಯಾಧ್ಯಕ್ಷ ಟಿ.ಡಿ. ರಾಜಗಿರಿ ಮಾತನಾಡಿ, ಅಧಿಕಾರಿಗಳು ಮತ್ತು ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದ ರೀತಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಲಾಗುತ್ತಿದೆ. ನಿವೇಶನ ರಹಿತ ಕುಟುಂಬಗಳಿಗೆ ಹಲವು ವರ್ಷಗಳಿಂದ ನ್ಯಾಯ ದೊರೆತಿಲ್ಲ. ನಿವೇಶನ ಹಂಚಿಕೆ ಆಗುವ ತನಕ ಪ್ರತಿಭಟನೆ ಹಿಂದಕ್ಕೆ ಪಡೆಯುವುದಿಲ್ಲ ಎಂದರು.
ದಸಂಸ ಜಿಲ್ಲಾಧ್ಯಕ್ಷ ಚೌಳೂರು ಮಂಜು, ವಕೀಲ ಆರ್. ರುದ್ರಮುನಿ, ಬಿಜೆಪಿ ಮಂಡಲ ಅಧ್ಯಕ್ಷ ಜಿ.ಎಂ. ಸುರೇಶ್ ಹಿರೇಮಧುರೆ, ಬಂಡೆ ರಂಗಸ್ವಾಮಿ, ಡಿ. ದಯಾನಂದ, ಕೋನಿಗರಹಳ್ಳಿ ಹರೀಶ್, ಟಿ. ಮಲ್ಲೇಶಿ, ದೊಡ್ಡಚೆಲ್ಲೂರು ತಿಮ್ಮಣ್ಣ, ರುದ್ರಮುನಿ ಮತ್ತಿತರರಿದ್ದರು.