ಸಿರಿಗೆರೆಯಲ್ಲಿ ಮಂಗಳವಾರ ಆಯೋಜಿಸಿದ್ದ ರಾಜ್ಯಮಟ್ಟದ ವೀರಗಾಸೆ ಸ್ಪರ್ಧೆ ಹಾಗೂ ಜಗದ್ಗುರು ಶ್ರೀ ಗುರುಶಾಂತರಾಜ ದೇಶಿಕೇಂದ್ರ ಸ್ವಾಮೀಜಿ ಅವರ 88ನೇ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಡಾ.ಎಚ್.ವಿ. ವಾಮದೇವಪ್ಪ, ಎಚ್.ಎಂ. ರವಿ, ಜಿ. ಬಸವರಾಜಪ್ಪ, ಬಿ.ಎಸ್. ಮರುಳಸಿದ್ದಯ್ಯ ಇತರರು ಇದ್ದರು. Competition
ನಾಡಿನ ಸಂಸ್ಕೃತಿ, ಪರಂಪರೆ ಹಾಗೂ ಧಾರ್ಮಿಕ ಬದುಕಿನ ಪ್ರತೀಕವಾದ ಜಾನಪದ ಕಲೆಗಳು ಮತ್ತು ಕಲಾವಿದರನ್ನು ಪ್ರೋತ್ಸಾಹಿಸುವ ಅಗತ್ಯವಿದೆ ಎಂದು ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
Competition
ಸಿರಿಗೆರೆಯ ಶ್ರೀ ಗುರುಶಾಂತೇಶ್ವರ ದಾಸೋಹ ಮಂಟಪದಲ್ಲಿ ಮಂಗಳವಾರ ಆಯೋಜಿಸಿದ್ದ 19ನೇ ಶ್ರೀ ತರಳಬಾಳು ಜಗದ್ಗುರು ಶ್ರೀ ಗುರುಶಾಂತರಾಜ ದೇಶಿಕೇಂದ್ರ ಸ್ವಾಮೀಜಿ ಅವರ 88ನೇ ಶ್ರದ್ಧಾಂಜಲಿ ಸಮಾರಂಭ ಹಾಗೂ ರಾಜ್ಯಮಟ್ಟದ ವೀರಗಾಸೆ ಸ್ಪರ್ಧೆಯಲ್ಲಿ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
1938ರ ಆ.12ರಂದು ಶ್ರೀ ಗುರುಶಾಂತರಾಜ ದೇಶಿಕೇಂದ್ರ ಸ್ವಾಮೀಜಿ ಅವರು ದುಷ್ಟರ ಸಂಚಿಗೆ ಬಲಿಯಾದ ದಿನ. ಮಠದ ಇತಿಹಾಸದಲ್ಲಿ ಕರಾಳ ದಿನವೂ ಆಗಿದೆ. ಬಳಿಕ ಶ್ರೀ ಶಿವಕುಮಾರ ಸ್ವಾಮೀಜಿ ಅವರು ಮಠವನ್ನು ಮುನ್ನಡೆಸಿ ಅಭಿವೃದ್ಧಿಯ ಹಾದಿಯಲ್ಲಿ ಕೊಂಡೊಯ್ದರು ಎಂದು ಸ್ಮರಿಸಿದರು.
ಸರ್ಕಾರಿ ಕಾರ್ಯಕ್ರಮಗಳಿಗೂ ಮಠದಲ್ಲಿ ನಡೆಯುವ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ವ್ಯತ್ಯಾಸವಿದೆ. ಮಠದ ಆವರಣದಲ್ಲಿ ಶ್ರದ್ಧಾಭಕ್ತಿ ಹಾಗೂ ಧಾರ್ಮಿಕ ಭಾವನೆಯೊಂದಿಗೆ ಕಲಾವಿದರು ಕಲಾ ಪ್ರದರ್ಶನ ನೀಡುತ್ತಾರೆ ಎಂದರು.
ಸರ್ಕಾರ ನೀಡುವ ಪ್ರೋತ್ಸಾಹವನ್ನು ಕಲಾವಿದರು ಸದುಪಯೋಗಪಡಿಸಿಕೊಂಡು ಕಲೆಗಳನ್ನು ಉಳಿಸಬೇಕು ಎಂದು ತಿಳಿಸಿದರು.
ವಿಶ್ವಬಂಧು ಮರುಳಸಿದ್ದರ ಜೀವನ, ವ್ಯಕ್ತಿತ್ವ ಹಾಗೂ ಸಾಧನೆಯನ್ನು ಜಾನಪದ ಗೀತೆಗಳು ಮತ್ತು ವೀರಗಾಸೆ ಮೂಲಕ ದಾಖಲಿಸುವ ಸಾಹಿತ್ಯ ಕೃತಿ ಹೊರತರುವ ಆಶಯವಿದೆ. ಇದನ್ನು ಅಧ್ಯಾಪಕರು ಸಾಕಾರಗೊಳಿಸಬೇಕು ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷ ಬಿ. ಟಾಕಪ್ಪ ಮಾತನಾಡಿ, ಕಲೆ, ಸಂಸ್ಕೃತಿ ಮತ್ತು ಸಾಹಿತ್ಯಕ್ಕೆ ಹೆಚ್ಚಿನ ಒತ್ತು ನೀಡುತ್ತಿರುವ ಸಿರಿಗೆರೆ ತರಳಬಾಳು ಬೃಹನ್ಮಠ ಕಲಾವಿದರಿಗೆ ಪ್ರೇರಣೆಯಾಗಿದೆ. ವೀರಗಾಸೆ ಧಾರ್ಮಿಕ ಕಲೆಯಾಗಿದ್ದು, ಅದು ಯಾವುದೇ ಒಂದು ಜಾತಿಗೆ ಸೀಮಿತವಲ್ಲ ಎಂದರು.
ಹಿಂದೆ ಪುರುಷರು ಮಾತ್ರ ವೀರಗಾಸೆಯಲ್ಲಿ ಒಡಪುಗಳನ್ನು ಹೇಳುತ್ತಿದ್ದರು. ಈಗ ಮಹಿಳೆಯರೂ ಪಾಲ್ಗೊಳ್ಳುತ್ತಿದ್ದಾರೆ ಎಂದು ಹೇಳಿದರು.
ಸೋಮವಾರ ಶ್ರೀ ಕತೃ ಗದ್ದುಗೆಯಲ್ಲಿ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಹಾಗೂ ಶಿವದೀಕ್ಷಾ ಸಂಸ್ಕಾರ ನೆರವೇರಿತು. ಸಂಜೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀಮಠದ ಸಕಲ ಬಿರುದಾವಳಿಗಳೊಂದಿಗೆ ಬೆಳ್ಳಿ ಸಾರೋಟಿನಲ್ಲಿ ಶ್ರೀ ಗುರುಶಾಂತರಾಜ ದೇಶಿಕೇಂದ್ರ ಮಹಾಸ್ವಾಮೀಜಿ ಭಾವಚಿತ್ರದ ಮೆರವಣಿಗೆ ಹಾಗೂ ವೀರಗಾಸೆ ತಂಡಗಳ ಕಲಾ ಪ್ರದರ್ಶನ ಅದ್ದೂರಿಯಾಗಿ ನಡೆಯಿತು.
ಹರಳಿಹಳ್ಳಿಯ ಕಾಟಲಿಂಗೇಶ್ವರ ಸಂಘ ಪ್ರಥಮ: ಪುರುಷ ವಿಭಾಗದ ವೀರಗಾಸೆ ಸ್ಪರ್ಧೆಯಲ್ಲಿ ಹರಳಿಹಳ್ಳಿಯ ಕಾಟಲಿಂಗೇಶ್ವರ ಸಂಘ ಪ್ರಥಮ, ನಾಗತಿ ಬೆಳಗಲಿಯ ಶ್ರೀ ನಂಜುಂಡೇಶ್ವರ ಯುವಕ ಸಂಘ ದ್ವಿತೀಯ, ಶ್ರೀನಿವಾಸಪುರದ ಶ್ರೀ ತಿರುಮಲ ಯುವಕರ ಸಂಘ ತೃತೀಯ ಸ್ಥಾನ ಪಡೆದವು. ಮಹಿಳಾ ವೀರಗಾಸೆ ವಿಭಾಗದಲ್ಲಿ ನಾಗೇನಹಳ್ಳಿಯ ವೆಂಕಟೇಶ್ವರ ಮಹಿಳಾ ತಂಡ ಪ್ರಥಮ, ಗೋಪಾಲ ಭೂಷಣಹಳ್ಳಿಯ ಲಕ್ಷ್ಮೀ ರಂಗನಾಥ ಮಹಿಳಾ ತಂಡ ದ್ವಿತೀಯ ಸ್ಥಾನ ಗಳಿಸಿತು. ಪುರವಂತಿಕೆ ವಿಭಾಗದಲ್ಲಿ ಅರಳೇಶ್ವರ ಯಲವಟ್ಟಿಯ ಶ್ರೀ ಸಿದ್ದೇಶ್ವರ ಪುರವಂತಿಕೆ ಸೇವಾ ಸಂಘ ಪ್ರಥಮ, ತಾವರಕೊಪ್ಪದ ಶ್ರೀ ವೀರಭದ್ರೇಶ್ವರ ಪುರವಂತಿಕೆ ಸೇವಾ ಸಂಘ ದ್ವಿತೀಯ ಹಾಗೂ ಯಲವಗಿಯ ಶ್ರೀ ವೀರಭದ್ರೇಶ್ವರ ಪುರವಂತಿಕೆ ಸೇವಾ ಸಂಘ ತೃತೀಯ ಸ್ಥಾನ ಪಡೆದವು. ವಿಜೇತರಿಗೆ ಕ್ರಮವಾಗಿ 10 ಸಾವಿರ ರೂ., 7,500 ರೂ. ಹಾಗೂ 5 ಸಾವಿರ ರೂ. ಬಹುಮಾನ ವಿತರಿಸಲಾಯಿತು.
ಮಠದ ಆಡಳಿತಾಧಿಕಾರಿ ಡಾ.ಎಚ್.ವಿ. ವಾಮದೇವಪ್ಪ, ಜಾನಪದ ಕಲಾವಿದ ಎಚ್.ಎಂ. ರವಿ, ನಿವೃತ್ತ ಪ್ರೌಢಶಾಲಾ ಮುಖ್ಯಶಿಕ್ಷಕ ಜಿ. ಬಸವರಾಜಪ್ಪ, ಅಣ್ಣನ ಬಳಗದ ಅಧ್ಯಕ್ಷ ಬಿ.ಎಸ್. ಮರುಳಸಿದ್ದಯ್ಯ, ವಿಜಯಚಾರಿ, ಅಣ್ಣನ ಬಳಗದ ಸದಸ್ಯರು, ವಿದ್ಯಾರ್ಥಿಗಳು, 15 ವೀರಗಾಸೆ ತಂಡಗಳ ಕಲಾವಿದರು ಭಾಗವಹಿಸಿದ್ದರು.