ಐಮಂಗಲ:Aimangala ಹೋಬಳಿಯ ಮರಡಿದೇವಿಗೆರೆ ಗ್ರಾಮದಲ್ಲಿ ಶ್ರೀ ಮಹೇಶ್ವರ ಪೂಜೆಯನ್ನು ಭಕ್ತರು ಶ್ರದ್ಧಾ ಭಕ್ತಿಯಿಂದ ಸಲ್ಲಿಸಿದರು.
ಗ್ರಾಮದ ಶ್ರೀ ಕೋಡಿ ಮಲ್ಲೇಶ್ವರ ಸ್ವಾಮಿಯನ್ನು ಊರ ಹೊರಗಿನ ಕೆರೆಯಲ್ಲಿ ಗಂಗಾಪೂಜೆ ಮಾಡಿ ಹೊರ ಮಠದ ಹತ್ತಿರ ಹಸಿರು ತೆಂಗಿನ ಗರಿಗಳಿಂದ ನಿರ್ಮಿಸಿದ ಮಂಟಪದಲ್ಲಿ ಪ್ರತಿಷ್ಠಾಪಿಸಲಾಯಿತು.
ಸುತ್ತಲೂ ಮಾವಿನ ತೋರಣ ಕಟ್ಟಿ ಮಂಟಪವನ್ನು ಸಿಂಗರಿಸಲಾಗಿತ್ತು.ದೇವರಿಗೆ ನಾನಾ ಪುಷ್ಪಗಳಿಂದ ಅಲಂಕರಿಸಿ ಸೂರ್ಯೋದಯಕ್ಕೂ ಮೊದಲೇ ವಿಶೇಷ ಧಾರ್ಮಿಕ ವಿಧಿವಿಧಾನಗಳು ನಡೆದವು. ಬಾಳೆಹಣ್ಣು, ಅನ್ನ ನೈವೇದ್ಯ ಮಾಡಿ ಮಹಾಮಂಗಳಾರತಿಯ ನಂತರ ಅನ್ನಸಂತರ್ಪಣಾ ಕಾರ್ಯಕ್ರಮ ನಡೆಯಿತು.
ಇಲ್ಲಿ ಪುರುಷರಷ್ಟೇ ಬಂದು ಪೂಜೆ ಸಲ್ಲಿಸುವುದು ವಾಡಿಕೆ. ಬೆಳಗಿನ ಈ ಪೂಜೆಯಲ್ಲಿ ಮಹಿಳೆಯರು ಭಾಗವಹಿಸುವುದಿಲ್ಲ, ಸಂಜೆ ಗ್ರಾಮದಲ್ಲಿ ಮಹಿಳೆಯರೆಲ್ಲರೂ ಸೇರಿ ಹೊರ ಮಠದಲ್ಲಿ ದುರುಗಮ್ಮ, ಮರಿಗಮ್ಮನನ್ನು ಪ್ರತಿಷ್ಠಾಪಿಸಿ ಸಾಮೂಹಿಕವಾಗಿ ಪೂಜೆ ಸಲ್ಲಿಸುತ್ತಾರೆ.ಒಂದೆಡೆ ಅಡುಗೆ ತಯಾರಿಸಿ ಗ್ರಾಮದ ಪ್ರತಿ ಮನೆಯಿಂದಲೂ ಪೂಜಾ ಕೈಂಕರ್ಯದಲ್ಲಿ ಭಾಗವಹಿಸಿ ಸಾಮೂಹಿಕ ಭೋಜನ ಮಾಡುತ್ತಾರೆ.
ಒಂದು ದಿನ ಮಾತ್ರ ಈ ಜಾತ್ರೆ ಆಚರಿಸುವುದು ವಾಡಿಕೆ, ಪೂರ್ವಜರ ಕಾಲದಿಂದಲೂ ಜಾತ್ರೆ ನಡೆಸಿಕೊಂಡು ಬಂದಿದ್ದು, ಇದನ್ನು ಆಚರಿಸುವುದರಿಂದ ಗ್ರಾಮವು ರೋಗ ರುಜಿನಗಳಿಂದ ಮುಕ್ತವಾಗಿ ಶಾಂತಿ ನೆಲೆಸಿ, ಸಮೃದ್ಧ ಮಳೆ ಬೆಳೆಯಾಗುತ್ತದೆ ಎಂಬ ನಂಬಿಕೆ ಇದೆ ಎಂದು ಗ್ರಾಮದ ಹಿರಿಯರು ತಿಳಿಸಿದರು.