

ಪ್ರಮುಖ ಮುಖ್ಯಾಂಶಗಳು
ತಾಲೂಕಿನ ಧರ್ಮಪುರ, ಜೆ.ಜಿ. ಹಳ್ಳಿ, ಐಮಂಗಲ ಹೋಬಳಿಯ ಹಳ್ಳಿಗಳಿಂದ ಪಟ್ಟಣದ ಶಾಲಾ-ಕಾಲೇಜಿಗೆ ಬರಲು ಸಕಾಲಕ್ಕೆ ಬಸ್ ಸೌಲಭ್ಯ ಇಲ್ಲದೆ ನಿತ್ಯ ಪರದಾಡುವಂತಾಗಿದೆ. ಗ್ರಾಮೀಣ ಭಾಗಕ್ಕೆ ಹೆಚ್ಚುವರಿ ಬಸ್ ಸಂಪರ್ಕ ವ್ಯವಸ್ಥೆ ಕಲ್ಪಿಸುವಂತೆ ವಿದ್ಯಾರ್ಥಿಗಳು ಒತ್ತಾಯಿಸಿದರು.
"ಹೆಚ್ಚುವರಿ ಬಸ್‌ಗಳ ಸೌಲಭ್ಯ ಇಲ್ಲದೆ ಗ್ರಾಮೀಣ ಬಸ್ ಡಿಪೋ ಇದ್ದೂ ಇಲ್ಲದಂತಾಗಿದೆ. ಸ್ಥಳೀಯ ಜನಪ್ರತಿನಿಧಿಗಳು, ಸಾರಿಗೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ," ಎಂದು ದೂರಿದರು.
ಹಿರಿಯೂರು ನಗರದಿಂದ 7 ಕಿ.ಮೀ ದೂರದಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ 500 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಹಿರಿಯೂರು-ಚಿತ್ರದುರ್ಗಕ್ಕೆ ಸಂಚರಿಸುವ ಬಸ್‌ಗಳು ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಲ್ಲಿಸುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಈ ಮಾರ್ಗದಲ್ಲಿ ಸಂಚರಿಸುವ ಬಸ್‌ಗಳು ಸರ್ವೀಸ್ ರಸ್ತೆಯಲ್ಲಿ ಸಂಚರಿಸಿ, ಕಾಲೇಜಿನ ಮುಂದೆ ನಿಲುಗಡೆ ಮಾಡಬೇಕು ಎಂದು ಆಗ್ರಹಿಸಿದರು.
"ಹಿರಿಯೂರಿಂದ ನಿತ್ಯ ಚಿತ್ರದುರ್ಗ, ದಾವಣಗೆರೆ, ತುಮಕೂರು, ಶಿರಾ ಇನ್ನಿತರೆಡೆ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಬಸ್‌ನಲ್ಲಿ ಒಂಟಿ ಕಾಲಿನಲ್ಲಿ ನಿಂತು ಪ್ರಯಾಣಿಸುವ ಪರಿಸ್ಥಿತಿ ಇದೆ. ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸಿದರೆ ಮಾತ್ರ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ," ಎಂದು ಮನವಿ ಮಾಡಿದರು.
ಬಸ್ ನಿಲ್ದಾಣದ ಬಳಿ ನೂರಾರು ವಿದ್ಯಾರ್ಥಿಗಳು ಪ್ರತಿಭಟಿಸಿ, ಸಾರಿಗೆ ಸಂಸ್ಥೆ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.
"ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ತೆರಳಲು ಅನುಕೂಲವಾಗುವಂತೆ ಬೆಳಿಗ್ಗೆ-ಸಂಜೆ ಧರ್ಮಪುರ, ಜೆ.ಜಿ. ಹಳ್ಳಿ, ಐಮಂಗಲ ಮಾರ್ಗದಲ್ಲಿ ಬಸ್ ಸಂಚರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು," ಎಂದು ಅಧಿಕಾರಿಗಳು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಎಬಿವಿಪಿ ವಿದ್ಯಾರ್ಥಿ ಸಂಘಟನೆಯ ವೀರೇಶ್, ಕುಬೇರ್ ಯಾದವ್, ಸುದೀಪ್, ಕನಕರಾಜ್, ಧನುಷ್, ತರುಣ್, ಕುಮಾರ್ ಚೇತನ್, ಅಕ್ಷಯ್, ಓಬಳೇಶ್, ತಿಪ್ಪೇಸ್ವಾಮಿ, ರಂಗನಾಥ್, ಚಿದಾನಂದ್, ಕಾವ್ಯಾ, ಭೂಮಿಕಾ, ಭವಾನಿ ಇತರರಿದ್ದರು.