

ಚಿತ್ರದುರ್ಗ: ಬಿ.ಎಸ್.ಯಡಿಯೂರಪ್ಪ ಪೂರ್ಣಾವಧಿ ಮುಖ್ಯಮಂತ್ರಿ. ಅವರ ಹಿಂದೆ ಇಡೀ ಪಕ್ಷವಿದ್ದು, ಸರ್ಕಾರ ಬೀಳುತ್ತದೆ ಎಂಬುದು ಕಾಂಗ್ರೆಸ್ ನಾಯಕರ ಹಗಲು ಕನಸು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದರು.
ನಗರದ ಉಮಾಪತಿ ಕಲ್ಯಾಣ ಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಬಿಜೆಪಿ ನೂತನ ಜಿಲ್ಲಾಧ್ಯಕ್ಷ ಎ.ಮುರುಳಿ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿ, ಕರ್ನಾಟಕದಲ್ಲಿ ಇನ್ನೆರೆಡು ಅವಧಿಗೆ ಬಿಜೆಪಿಯೇ ಅಧಿಕಾರ ನಡೆಸಲಿದೆ ಎಂದು ತಿಳಿಸಿದರು.
ಮೊದಲ ಅಧಿಕಾರಾವಧಿಯಲ್ಲಿ ರೈತ ಬಜೆಟ್ ಮಂಡನೆಯೊಂದಿಗೆ, ಭಾಗ್ಯಲಕ್ಷ್ಮೀ, ಸಂಧ್ಯಾಸುರಕ್ಷಾ ಸಹಿತ ಹತ್ತು ಹಲವು ಜನಪರ ಯೋಜನೆಗಳ ಅನುಷ್ಠಾನಗೊಳಿಸಿದ್ದಾರೆಂದು ಯಡಿಯೂರಪ್ಪ ಅವರನ್ನು ಕೊಂಡಾಡಿದರು.
ರಾಜ್ಯ ಸರ್ಕಾರ ಬೀಳುತ್ತದೆ ಎಂಬುದು ಕಾಂಗ್ರೆಸ್ ನಾಯಕರ ಹಗಲು ಕನಸು. ಬಿಎಸ್‌ವೈ ತೆಗೆದುಕೊಳ್ಳು ನಿರ್ಧಾರಗಳಿಗೆ ಇಡೀ ಪಕ್ಷ ಬೆಂಬಲವಾಗಿ ನಿಲ್ಲಲ್ಲಿದೆ ಎಂದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನ ಹಾಗೂ ಸಿಎಲ್‌ಪಿ ಲೀಡರ್ ಆಯ್ಕೆ ವಿಷಯದಲ್ಲಿ ಕಾಂಗ್ರೆಸ್ಸಿನಲ್ಲಿ ಜಗಳ ಜೋರಾಗಿದ್ದು, ಸಿದ್ದರಾಮಯ್ಯ ಶೀಘ್ರದಲ್ಲಿಯೇ ಪಕ್ಷ ತೊರೆಯುದು ಖಚಿತ ಎಂದು ಭವಿಷ್ಯ ನುಡಿದರು. ಪಕ್ಷದಲ್ಲಿ ಮೂಲ, ವಲಸೆ ಎಂಬ ಬೇಧವಿಲ್ಲ. ಹಾಲಿನೊಂದಿಗೆ ಸಕ್ಕರೆಯಂತೆ ಬೆರೆತ್ತಿದ್ದೇವೆ ಎಂದು ಹೇಳಿದರು.
ರಾಜಕೀಯವಾಗಿ ಆರಿದ ದೀಪ: ಮಲ್ಲಿಕಾರ್ಜುನ ಖರ್ಗೆ ರಾಜಕೀಯವಾಗಿ ಆರಿದ ದೀಪವೆಂದು ಪ್ರಧಾನಿ ವಿರುದ್ಧ ಟೀಕಿಗೆ ಕಟೀಲ್ ಪ್ರತಿಕ್ರಿಯಿಸಿದರು. ಮೋದಿ ಸಾವಿರ ವೋಲ್ಟ್ ಹಾಲೋಜಿನ್ ಬಲ್ಪ್ ಇದ್ದಂತೆ. ರಾಜ್ಯಸಭೆಗೆ ಕಳಿಸಲಿಲ್ಲವೆಂಬ ದುಃಖದಲ್ಲಿ ಖರ್ಗೆ ಭ್ರಮನಿರಸನದಿಂದ ಮಾತನಾಡುತ್ತಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರು ಕಾಂಗ್ರೆಸ್ಸಿನ ಮತ್ತೊಂದು ಮುಖ ಎಂದು ಟೀಕಿಸಿದರು.
ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಎಂ.ಚಂದ್ರಪ್ಪ, ಪೂರ್ಣಿಮಾ ಶ್ರೀನಿವಾಸ್, ನಿಕಟ ಪೂರ್ವ ಜಿಲ್ಲಾಧ್ಯಕ್ಷ ಕೆ.ಎಸ್.ನವೀನ್ ನೂತನ ಜಿಲ್ಲಾಧ್ಯಕ್ಷ ಎ.ಮುರುಳಿ, ಪ್ರಭಾರಿ ಜಿ.ಎಂ.ಸುರೇಶ್ ಇತರರಿದ್ದರು.