

ಚಿತ್ರದುರ್ಗ: ಮಹಿಳೆಯರು ಸಹನೆ ಮೀರಿ ಕೊನೆ ಆಯ್ಕೆಯಾಗಿ ಪೊಲೀಸ್ ಠಾಣೆಗೆ ಬಂದಿರುತ್ತಾರೆ. ಅವರನ್ನು ಸಮಾಧಾನದಿಂದ ಮಾತನಾಡಿಸಿದರೆ ಅರ್ಧ ಸಮಸ್ಯೆ ಬಗೆಹರಿಯಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ತಿಳಿಸಿದರು.
ನಗರದ ಪೊಲೀಸ್ ಸಮುದಾಯ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಭಾನುವಾರ ಆಯೋಜಿಸಿದ್ದ ಲಿಂಗತ್ವದ ಬಗ್ಗೆ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಠಾಣೆಗೆ ಬರುವ ಮಹಿಳೆಯರೊಂದಿಗೆ ಗೌರವದಿಂದ ವರ್ತಿಸಬೇಕು. ಅವರ ಸಮಸ್ಯೆಗೆ ಸ್ಪಂದಿಸಬೇಕು ಎಂದು ತಿಳಿಸಿದರು.
ಮಹಿಳಾ ಸಬಲೀಕರಣ ನನ್ನ ಆಸಕ್ತಿದಾಯಕ ವಿಷಯ. ಎಲ್ಲ ವಿಭಾಗದಲ್ಲೂ ಮಹಿಳೆಯರು ಸಬಲರಾಗಬೇಕು. ಯಾರಿಗೆ ತೊಂದರೆಯಾದರೂ ಮೊದಲು ಬರುವುದು ಪೊಲೀಸ್ ಠಾಣೆಗೆ. ಹೆಣ್ಮಕ್ಕಳು ಠಾಣೆಗೆ ಬರುವುದು ತೀರಾ ಕಡಿಮೆ. ಪೊಲೀಸ್ ಠಾಣೆ ಮೇಟ್ಟಿಲೇರಿದ ಮಹಿಳೆಯನ್ನು ನೋಡುವ ಸ್ವಭಾವ ಸಮಾಜದಲ್ಲಿ ಬದಲಾಗಬೇಕು. ದೂರು ಕೊಡಲು ಬಂದವಳೇ ತಪ್ಪು ಮಾಡಿದ್ದಾಳೆ ಅನ್ನೋ ಭಾವನೆಗೆ ಬರಬಾರದು. ಸಕಾರಾತ್ಮಕ ಭಾವನೆಯಲ್ಲಿ ನೋಡುವಂತಾಗಬೇಕು ಎಂದು ಹೇಳಿದರು.
ಸಂಕಷ್ಟದಲ್ಲಿ ಪೊಲೀಸ್ ಠಾಣೆಗೆ ಬರುವ ಹೆಣ್ಣಿಗೆ ಮೊದಲು ಸಾಂತ್ವನ ಹೇಳುವ ಕೆಲಸ ಆಗಬೇಕು. ಮಹಿಳಾ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಈ ಬಗ್ಗೆ ಜಾಗೃತರಾಗಿ ಕೆಲಸ ಮಾಡಬೇಕು. ರಾಣೆಗೆ ಬಂದ ಮಹಿಳೆಗೆ ನಮ್ಮ ವ್ಯಾಪ್ತಿಗೆ ಬರೋದಿಲ್ಲ ಎಂದು ಅಲೆದಾಡಿಸುವುದು ಸರಿಯಲ್ಲ ಎಂದರು.
ವ್ಯಾಪ್ತಿ ಕೇಳದೆ ಝೀರೋ ಎಫ್‌ಐಆರ್ ಮಾಡಿ ಬಳಿಕ ಸಂಬಂಧಪಟ್ಟ ಠಾಣೆಗೆ ಪ್ರಕರಣ ವರ್ಗಾಯಿಸಬೇಕು. ಸಿಬ್ಬಂದಿ ನಮ್ಮ ವ್ಯಾಪ್ತಿಗೆ ಬರೋದಿಲ್ಲ ಅಂತ ಅಲೆದಾಡಿಸಿದರೆ ನ್ಯಾಯಾಂಗ ನಿಂದನೆ ಆಗುತ್ತದೆ. ಝೀರೋ ಎಫ್‌ಐಆರ್ ಮಾಡುವ ಬಗ್ಗೆ ಸುಪ್ರೀಂ ಕೋರ್ಟ್ ಸ್ಪಷ್ಟ ಆದೇಶ ನೀಡಿದೆ ಎಂದು ತಿಳಿಸಿದರು.
ಪೊಲೀಸರು ಅತ್ಯಾಚಾರ ಸಂತ್ರಸ್ತರನ್ನು ನೋಡುವ ರೀತಿ ಬದಲಾಗಬೇಕು. ಮಹಿಳೆಯರಿಗೆ ರಕ್ಷಣೆ ನೀಡುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಓಬವ್ವ ಪಡೆ ರಚನೆ ಮಾಡಲಾಗುವುದು. ಪೋಕ್ಸೋ ಕಾಯ್ದೆ ಬಗ್ಗೆ ಶಾಲಾ, ಕಾಲೇಜು ಮಕ್ಕಳಿಗೆ ಅರಿವು ಮೂಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಮಹಿಳಾ ಸಮಾಖ್ಯಾ ಫೇಡರೇಷನ್ ಜಿಲ್ಲಾ ಸಂಯೋಜಕಿ ರಾಜೇಶ್ವರಿ ಮಾತನಾಡಿ, 1986ರ ಶಿಕ್ಷಣ ನೀತಿಯಡಿ ಹುಟ್ಟಿಕೊಂಡ ಕಾರ್ಯಕ್ರಮ ಮಹಿಳಾ ಸಮಾಖ್ಯಾ. ಆರಂಭದಲ್ಲಿ ಮೂರು ರಾಜ್ಯಗಳಲ್ಲಿ ಜಾರಿಯಾಗಿ, ಯಶಸ್ಸು ಕಂಡು ಈಗ 11 ರಾಜ್ಯಗಳ 78 ಜಿಲ್ಲೆಗಳಲ್ಲಿ ಜಾರಿಯಾಗಿದೆ. ಗ್ರಾಮೀಣ ಭಾಗದ ಮಹಿಳೆಯರ ಶಿಕ್ಷಣ ಸುಧಾರಣೆ ಹಿನ್ನೆಲೆಯಲ್ಲಿ ಸಮಾಖ್ಯಾ ಕೆಲಸ ಮಾಡುತ್ತಿದೆ ಎಂದರು.
ಎಎಸ್ಪಿ ನಂದಗಾಂವಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಭಾರತಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಚಂದ್ರಪ್ಪ ಮತ್ತಿತರರು ಇದ್ದರು.