ಸಾಮಾಜಿಕ ತಾಣಗಳ ಮೇಲೆ ಪೊಲೀಸರ ಕಣ್ಣು

SP RADHIKA G sp
Published on

ಚಿತ್ರದುರ್ಗ: ಸಾಮಾಜಿಕ ಜಾಲ ತಾಣ ಬಳಸವವರೇ ಎಚ್ಚರ. ತಮ್ಮೆಲ್ಲ ಚಟುವಟಿಕೆಗಳ ಮೇಲೆ ಜಿಲ್ಲಾ ಪೊಲೀಸರು ಹದ್ದಿನ ಕಣ್ಣಿದ್ದಾರೆ.

ಕರೊನಾ ಸೋಂಕು, ಕೋಮು ಭಾವನೆ ಸಹಿತ ಇನ್ಯಾವುದೇ ಸುಳ್ಳು ಸುದ್ದಿಗಳನ್ನು ಫೇಸ್‌ಬುಕ್, ವಾಟ್ಸ್ ಆ್ಯಪ್ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟರೆ ತಪ್ಪಿತಸ್ಥರಿಗೆ ಶಿಕ್ಷೆ ಖಚಿತವೆಂದು ಎಸ್ಪಿ ಜಿ.ರಾಧಿಕಾ ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸಂದೇಶ ಗಮನಿಸಲೆಂದೇ ಒಂದು ವಿಶೇಷ ತಂಡ 24 ಗಂಟೆ ಕಾರ‌್ಯನಿರ್ವಹಿಸುತ್ತಿದೆ. ಲಾಕ್‌ಡೌನ್ 2 ನೇ ಹಂತದಲ್ಲಿ ಒಂದಿಷ್ಟು ಅಂಗಡಿ ಮುಂಗಟ್ಟುಗಳ ಸೇವೆಗೆ ಅವಕಾಶ ಸಿಕ್ಕಿದೆ. ಹಾಗೆಂದು ಸಾಮಾಜಿಕ ಅಂತರ, ಸ್ಯಾನಿಟೈಜೇಶನ್ ಸಹಿತ ಸೋಂಕು ನಿಯಂತ್ರಣದಲ್ಲಿ ಕೇಂದ್ರದ ಮಾರ್ಗಸೂಚಿ ಅನುಸರಿಸದಿದ್ದರೆ ಅಂಗಡಿ ಮುಂಗಟ್ಟುಗಳ ಪರವಾನಗಿ ರದ್ದತಿಗೆ ಶಿಫಾರಸು ಮಾಡಿ, ಮಾಲೀಕರ ವಿರುದ್ಧ ಕ್ರಮ ಜರುಗಿಸಲಾಗುವುದು. ಅಂಗಡಿ ಮುಂಗಟ್ಟಗಳ ಬಳಿ ವಿಡಿಯೊ ಚಿತ್ರೀಕರಣವೂ ನಡೆಯಲಿದೆ ಎಂದರು.

ವೈದ್ಯರು, ವೈದ್ಯಕೀಯ ಸಿಬ್ಬಂದಿ, ಆಶಾ, ಅಂಗನವಾಡಿ ಮೊದಲಾದ ಕರ್ತವ್ಯನಿರತ ಅಧಿಕಾರಿ, ಸಿಬ್ಬಂದಿ ಮೇಲೆ ಹಲ್ಲೆ ಮಾಡಿದರೆ, ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದರೆ, ವಿವಿಧ ಕಾಯ್ದೆ ಕಾನೂನುಗಳನ್ವಯ 2 ವರ್ಷಗಳಿಂದ 7 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ. ಜೂಜಾಟ ವೇಳೆ ಅಲ್ಲಿ ವಶಪಡಿಸಿಕೊಳ್ಳುವ ಹಣ, ವಾಹನ ಮತ್ತಿತರ ವಸ್ತುಗಳ ವಿಡಿಯೋ ಚಿತ್ರೀಕರಣಕ್ಕೆ ಸೂಚಿಸಲಾಗಿದೆ. ಅಕ್ರಮ ಮದ್ಯ ಮಾರಾಟಕ್ಕೆ ಸಂಬಂಧಿಸಿದ 33 ಪ್ರಕರಣಗಳಲ್ಲಿ 5 ಮದ್ಯದಂಗಡಿ ಮಾಲೀಕರ ವಿರುದ್ಧವೇ ದಾಖಲಾಗಿದೆ ಎಂದರು.

ಬಂದೋಬಸ್ತ್ ನಿರತ ಪೊಲೀಸರ ಭಯ ಹೋಗಲಾಡಿಸಲು ಮಾನಸಿಕ ತಜ್ಞರ ಮೂಲಕ ಕೌನ್ಸಿಲಿಂಗ್ ನಡೆಸಲಾಗುವುದು. ಪೊಲೀಸರ ವಾರದ ಹಾಗೂ ಅಗತ್ಯ ರಜೆ ಮಂಜೂರಿಗೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.

ಇದೇ ವೇಳೆ ಹಿಂಡಲಗಾ ಜೈಲಿನಲ್ಲಿ ಸಿದ್ಧಪಡಿಸಿದ್ಧ ಮಾಸ್ಕ್‌ಗಳನ್ನು ಪತ್ರಕರ್ತರಿಗೆ ವಿತರಿಸಿದರು. ಎಎಸ್ಪಿ ಎಂ.ಬಿ.ನಂದಗಾವಿ, ಡಿಆರ್ ಡಿವೈಎಸ್ಪಿ ತಿಪ್ಪೇಸ್ವಾಮಿ, ಸಿಪಿಐ ಮೃತ್ಯುಂಜಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net