ಸಾಮೂಹಿಕ ಪ್ರಾರ್ಥನೆಗೆ ಅವಕಾಶವಿಲ್ಲ

CTD MEETING 28
Published on

ಚಿತ್ರದುರ್ಗ: ಕರೊನಾ ಸೋಂಕು ನಿಯಂತ್ರಿಸಲು ಎಲ್ಲರೂ ಸಾಮಾಜಿಕ ಅಂತರವನ್ನು ಕಾಯ್ದು ಕೊಳ್ಳಬೇಕಿರುವುದರಿಂದ, ಜಿಲ್ಲೆಯ ಯಾವುದೇ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶವಿಲ್ಲವೆಂದು ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ ಹೇಳಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಮುಸ್ಲಿಂ ಮುಖಂಡರೊಂದಿಗೆ ನಡೆಸಿದ ಸಮಾಲೋಚನಾ ಸಭೆಯಲ್ಲಿ ಮಾತನಾಡಿ, ುಸೀದಿ ಬದಲು ಮನೆಗಳಲ್ಲಿ ಪ್ರಾರ್ಥನೆ ಮಾಡುವಂತೆ ಮನವಿ ಮಾಡಿದರು.

ಕರೊನಾ ವೈರಸ್ ಪ್ರಪಂಚದಾದ್ಯಂತ ವ್ಯಾಪಿಸುತ್ತಿದ್ದು, ಇದರ ಹತೋಟಿಗಾಗಿ ದೇಶದಲ್ಲಿ ಲಾಕ್‌ಡೌನ್ ಜಾರಿಯಲ್ಲಿದೆ. ದೇವಾಲಯ, ಚರ್ಚ್, ಮಸೀದಿ ಮೊದಲಾದ ಧಾರ್ಮಿಕ ಸ್ಥಳಗಳಲ್ಲಿ ಪ್ರಾರ್ಥನೆ, ಧಾರ್ಮಿಕ ಕಾರ್ಯಕ್ರಮ, ಸಮಾರಂಭಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಆದ್ದರಿಂದ ಜಿಲ್ಲೆಯ ಎಲ್ಲ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ನಿಷೇಧಿಸಲಾಗಿದೆ. ಧರ್ಮ ಗುರುಗಳ ಸಹಿತ ಮಸೀದಿಗಳಲ್ಲಿ ಇರುವವರ ಸಂಖ್ಯೆ ನಾಲ್ಕನ್ನು ಮೀರುವಂತಿಲ್ಲ. ವಕ್ಫ್ ಬೋರ್ಡ್ ಮೂಲಕ ಪ್ರತಿ ಮಸೀದಿಯ ಇಬ್ಬರಿಗೆ ಪಾಸ್ ನೀಡಲಾಗುತ್ತದೆ. ಯಾವುದೇ ಕಾರಣಕ್ಕೂ ಮಸೀದಿ ಬಳಿ ಜನರು ಸೇರಬಾರದು. ಉಲ್ಲಂಘಿಸಿದರೆ ರಾಷ್ಟ್ರೀಯ ವಿಪತ್ತು ಕಾಯ್ದೆ ಉಲ್ಲಂಘನೆಯಡಿ ಪ್ರಕರಣ ದಾಖಲಿಸುವುದಾಗಿ ಎಚ್ಚರಿಸಿದರು.

ಹಜ್ ಯಾತ್ರೆ ಅಥವಾ ಇತರೆ ದೇಶ, ರಾಜ್ಯಗಳಿಂದ ಆಗಮಿಸಿದ್ದಲ್ಲಿ ಅವರ ವಿವರವನ್ನು ಜಿಲ್ಲಾ ಆಡಳಿತಕ್ಕೆ ತಿಳಿಸುವುದು ಕಡ್ಡಾಯ. ಈ ಮಾಹಿತಿ ಮುಚ್ಚಿಟ್ಟಿರುವುದು ಗಮನಕ್ಕೆ ಬಂದರೂ ಕಾನೂನು ಕ್ರಮ ಜರುಗಿಸುವುದಾಗಿ ಹೇಳಿದರು.

ಎಎಸ್ಪಿ ಎಂ.ಬಿ.ನಂದಗಾವಿ, ಎಸಿ ವಿ.ಪ್ರಸನ್ನ, ಡಿವೈಎಸ್‌ಪಿ ಪಾಂಡುರಂಗಪ್ಪ, ಜಿಲ್ಲಾ ವಕ್ಪ್ ಮಂಡಳಿ ಅಧ್ಯಕ್ಷ ಕೆ.ಅನ್ವರ್‌ಭಾಷ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‌ಪೀರ್ ಮೊದಲಾದ ಪ್ರಮುಖರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net