ಮೈಸೂರು ಕೃಷಿ ಮೇಳಕ್ಕೆ ದುರ್ಗದ ರೈತರು

SURESH BABU BASTIHALLI
Published on

ಚಿತ್ರದುರ್ಗ: ವಿಜಯವಾಣಿ ನಂ.1 ಕನ್ನಡ ದಿನಪತ್ರಿಕೆ ಹಾಗೂ ದಿಗ್ವಿಜಯ ನ್ಯೂಸ್ ಚಾನೆಲ್ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಫೆ.21ರಿಂದ ಮೂರು ದಿನಗಳ ಕಾಲ ಆಯೋಜಿಸಿರುವ ಕೃಷಿ ಮೇಳದಲ್ಲಿ ಜಿಲ್ಲೆಯಿಂದಲೂ ರೈತರು ಪಾಲ್ಗೊಳ್ಳುತ್ತಿದ್ದಾರೆ.

21ರ ಬೆಳಗ್ಗೆ 10ಕ್ಕೆ ಮೈಸೂರಿನಲ್ಲಿ ಸಂಸ್ಕೃತ ಪಾಠಶಾಲೆಯಿಂದ ಮಹಾರಾಜ ಕಾಲೇಜುವರೆಗೆ ಮೆರವಣಿಗೆ ಹಾಗೂ ಬೆಳಗ್ಗೆ 10.30ಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೃಷಿ ಮೇಳ ಉದ್ಘಾಟಿಸಲಿದ್ದಾರೆ. ಮೇಳದ ಅಂಗವಾಗಿ ಜಾನಪದ ಗೀತೆಗಳ ಗಾಯನ, ಜಾನಪದ ನೃತ್ಯಸ್ಪರ್ಧೆ, ದೇಸಿ ಕ್ರೀಡಾ ಸ್ಪರ್ಧೆ ಹಾಗೂ ಸಂಜೆ 5ಕ್ಕೆ ಮಂಟೇಸ್ವಾಮಿ ಕಥಾ ಪ್ರಸಂಗ ನೆರವೇರಲಿದೆ.

22ರ ಬೆಳಗ್ಗೆ 10ಕ್ಕೆ ಕೃಷಿ ವಿಚಾರಗೋಷ್ಠಿ, ರಂಗೋಲಿ ಸ್ಪರ್ಧೆ, ವೇಷಭೂಷಣ ಸ್ಪರ್ಧೆ ಹಾಗೂ ಸಂಜೆ ಚೋರ ಚರಣದಾಸ ನಾಟಕ ನಡೆಯಲಿದೆ. 23ರಂದು ವಿಚಾರ ಗೋಷ್ಠಿ, ರಾಗಿಮುದ್ದೆ, ಬಾಳೆಹಣ್ಣು, ಕಡ್ಲೆಪುರಿ ತಿನ್ನುವ ಸ್ಪರ್ಧೆ ಹಾಗೂ ಸಮಾರೋಪ ಸಮಾರಂಭ ಇರುತ್ತದೆ. ಮೂರು ದಿನವೂ ಗೆಡ್ಡೆ ಗೆಣಸು ಹಾಗೂ ಸಿರಿಧಾನ್ಯಗಳ ಮೇಳ ಹಾಗೂ ಅಪರಿಮಿತ ಮಾಹಿತಿ ಇರುವ ಕೃಷಿ ವಸ್ತು ಪ್ರದರ್ಶನವನ್ನು ಆಯೋಜಿಸಲಾಗಿದೆ.

ಅಪರೂಪದ ಈ ಮೇಳದಲ್ಲಿ ಪಾಲ್ಗೊಳ್ಳುವ ಮೂಲಕ ಕೃಷಿ ಜ್ಞಾನ ಜಿಲ್ಲೆಯ ರೈತರಿಗೆ ದೊರೆಯಲಿ ಎಂಬ ಉದ್ದೇಶದಿಂದ ರೈತಸಂಘ ವಿಶೇಷ ಆಸಕ್ತಿ ವಹಿಸಿ ರೈತರನ್ನು ಕರೆದೊಯ್ಯಲಾಗುತ್ತಿದೆ ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಬಸ್ತಿಹಳ್ಳಿ ಸುರೇಶ್‌ಬಾಬು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net