

ಚಿತ್ರದುರ್ಗ: ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಆ.7ರಂದು ನಡೆಯಲಿರುವ ಕೆಪಿಟಿಸಿಎಲ್ ಸ್ಪರ್ಧಾತ್ಮಕ ಪರೀಕ್ಷೆಯನ್ನು ಸುವ್ಯವಸ್ಥಿತ ಹಾಗೂ ಸುಗಮವಾಗಿ ಪರೀಕ್ಷೆ ನಡೆಸುವಂತೆ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಕೆಪಿಟಿಸಿಎಲ್ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆ ಪೂರ್ವಸಿದ್ಧತೆ ಕುರಿತು ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ 8,592 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದು, 19 ಕೇಂದ್ರಗಳಲ್ಲಿ ಮೆಟಲ್ ಡಿಟೆಕ್ಟರ್ ಅಳವಡಿಕೆ ಮಾಡಿ ವಿದ್ಯಾರ್ಥಿಗಳನ್ನು ತಪಾಸಣೆಗೆ ಒಳಪಡಿಸಬೇಕು ಹಾಗೂ ಪರೀಕ್ಷಾ ಕೊಠಡಿಗಳಲ್ಲಿ ಸಿಸಿ ಟಿವಿ ಕ್ಯಾಮರಾ ಅಳವಡಿಸಬೇಕು. ಸುಗಮವಾಗಿ ಬಹು ಎಚ್ಚರಿಕೆಯಿಂದ ಕೆಪಿಟಿಸಿಎಲ್ ಪರೀಕ್ಷೆ ನಡೆಸಬೇಕು ಎಂದು ಸೂಚಿಸಿದರು.
ಪಪೂ ಶಿಕ್ಷಣ ಇಲಾಖೆ ಉಪನಿರ್ದೇಶಕ ಎನ್.ರಾಜು ಮಾತನಾಡಿ, ಆ.7ರಂದು ಬೆಳಗ್ಗೆ 10.30 ರಿಂದ 12.30ರವರೆಗೆ ಕಿರಿಯ ಸಹಾಯಕ ಹುದ್ದೆಗೆ ಪರೀಕ್ಷೆ ನಡೆಯಲಿದೆ. ಚಿತ್ರದುರ್ಗದ ಬಾಲಕರ ಸರ್ಕಾರಿ ಪಪೂ ಕಾಲೇಜು, ಮಹಾರಾಣಿ ಕಾಲೇಜು, ಬೃಹನ್ಮಠ ಕಾಲೇಜು, ಕೆಎಂಎಸ್ ಕಾಲೇಜು, ಚಿನ್ಮೂಲಾದ್ರಿ ಕಾಲೇಜು, ಡಾನ್ ಬಾಸ್ಕೋ ಕಾಲೇಜು, ಎಸ್‌ಆರ್‌ಎಸ್ ಕಾಲೇಜು, ಎಸ್‌ಎಲ್ವಿ ಕಾಲೇಜು, ಎಸ್‌ಜೆಎಂ ಕಾಲೇಜು, ವೆಸ್ಟರ್ನ್ ಹಿಲ್ಸ್ ಕಾಲೇಜು, ಮಹೇಶ್ ಕಾಲೇಜು, ವಾಸವಿ ಕನ್ನಡ ಪ್ರೌಢಶಾಲೆ, ಎಸ್‌ಜೆಎಂ ಪಾಲಿಟೆಕ್ನಿಕ್ ಜೆಎಂಐಟಿ ಕ್ಯಾಂಪಸ್ ಚಿತ್ರದುರ್ಗ, ಸರ್ಕಾರಿ ಕಲಾ ಕಾಲೇಜು, ಸರ್ಕಾರಿ ವಿಜ್ಞಾನ ಕಾಲೇಜು, ಎಸ್‌ಜೆಎಂ ಇಂಜಿನಿಯರಿಂಗ್ ಕಾಲೇಜು, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಸೇರಿ 19 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದರು.
ಆ.7ರಂದು ಮಧ್ಯಾಹ್ನ 2 ರಿಂದ ಸಂಜೆ 5 ರವರೆಗೆ ಕನ್ನಡ ಭಾಷೆ ಅಧ್ಯಯನ ಮಾಡದೇ ಇರುವ ಅಭ್ಯರ್ಥಿಗಳಿಗೆ ಬಾಲಕರ ಸರ್ಕಾರಿ ಪಪೂ ಕಾಲೇಜಿನಲ್ಲಿ ಕನ್ನಡ ಭಾಷಾ ಪರೀಕ್ಷೆ ನಡೆಯಲಿದ್ದು, 384 ಅಭ್ಯರ್ಥಿಗಳು ಹಾಜರಾಗಲಿದ್ದಾರೆ ಎಂದರು.
ಜಿಲ್ಲೆಯಲ್ಲಿ ಯಾವುದೇ ಸೂಕ್ಷ್ಮ, ಅತಿಸೂಕ್ಷ್ಮ ಕೇಂದ್ರಗಳಿಲ್ಲ. ಸ್ಪರ್ಧಾತ್ಮಕ ಪರೀಕ್ಷೆಗೆ ಜಾಗೃತದಳ ನೇಮಕ ಹಾಗೂ ಪರೀಕ್ಷಾ ಕೇಂದ್ರಗಳಿಗೆ ಪೊಲೀಸ್ ಬಂದೋಬಸ್ತ್ ಏರ್ಪಡಿಸುವ ಅವಶ್ಯಕತೆ ಇದೆ. ಕೇಂದ್ರದ ಸುತ್ತ 200 ಮೀಟರ್ ನಿಷೇಧಿತ ಪ್ರದೇಶ ಘೋಷಿಸುವ ಜತೆಗೆ ಜೆರಾಕ್ಸ್ ಅಂಗಡಿಗಳನ್ನು ಮುಚ್ಚಬೇಕು ಎಂದು ಸೂಚಿಸಿದರು.
ವಾಚ್ ಧರಿಸುವಂರತಿಲ್ಲ:
ಪರೀಕ್ಷಾರ್ಥಿಗಳು ವಾಚ್ ಧರಿಸಿ, ಮೊಬೈಲ್‌ನೊಂದಿಗೆ ಪರೀಕ್ಷೆಗೆ ಹಾಜರಾಗುವಂತಿಲ್ಲ. ಉಪನ್ಯಾಸಕರು, ಶಿಕ್ಷಕರು ಹಾಗೂ ಸಂಬಂಧಿಕರ ಮಕ್ಕಳು ಪರೀಕ್ಷೆ ಬರೆಯುತ್ತಿದ್ದರೆ ಅಂಥ ಸಿಬ್ಬಂದಿಯ್ನ ಪರೀಕ್ಷಾ ಕಾರ್ಯಕ್ಕೆ ನಿಯೋಜಿಸಬಾರದು ಎಂದರು.
ವೀಡಿಯೋ ಚಿತ್ರೀಕರಣ ನಿಷೇಧ:
ಜಿಲ್ಲೆಯ ಎಲ್ಲ ಪರೀಕ್ಷಾ ಕೇಂದ್ರಗಳ ಕೊಠಡಿಗಳಿಗೆ ಸ್ಯಾನಿಟೈಸರ್ ಮಾಡುವಂತೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಅಧಿಕಾರಿಗಳಿಗೆ ಮನವಿ ಮಾಡಿದರು. ವಿದ್ಯಾರ್ಥಿಗಳು ಪರೀಕ್ಷೆ ಬರೆಯುವುದನ್ನು ವಿಡಿಯೋ ಚಿತ್ರೀಕರಣ ಮಾಡುವುದನ್ನು ನಿಷೇಧಿಸಿದೆ. ಅಭ್ಯರ್ಥಿಗಳು ಸಮವಸ್ತ್ರ ಸಂಹಿತೆ ಪಾಲಿಸಬೇಕು. ಅರ್ಧ ತೋಳಿನ ಷರ್ಟ್ ಧರಿಸಬೇಕು. ಆಭರಣ ಧರಿಸುವಂತಿಲ್ಲ ಎಂದು ಹೇಳಿದರು.
ಅಭ್ಯರ್ಥಿಗಳು, ಪರೀಕ್ಷೆ ಆರಂಭವಾಗುವ 2 ತಾಸು ಮೊದಲೇ ಕೇಂದ್ರದ ಆವರಣದಲ್ಲಿ ಹಾಜರಿರಬೇಕು. ಪ್ರವೇಶ ಪತ್ರದ ಜತೆ ಅಭ್ಯರ್ಥಿ ಕಡ್ಡಾಯವಾಗಿ ಮಾನ್ಯತೆ ಇರುವ ಯಾವುದಾದರೂ ಒಂದು ಗುರುತಿನ ಚೀಟಿ ತೆಗೆದುಕೊಂಡು ಹೋಗಬೇಕು. ಇಲ್ಲದಿದ್ದಲ್ಲಿ ಅಭ್ಯರ್ಥಿಗಳನ್ನು ಪರೀಕ್ಷಾ ಕೊಠಡಿ ಒಳಗೆ ಅನುಮತಿಸುವುದಿಲ್ಲ ಎಂದರು.