ಬಂಧನಕ್ಕೆ ಒಳಗಾದವರ ಸಂಖ್ಯೆ 133

DC VINOTH PRIYA
Published on

ಚಿತ್ರದುರ್ಗ: ಲಾಕ್‌ಡೌನ್ ಇದೆ. ಮನೆಯಲ್ಲಿ ತೆಪ್ಪಗೆ ಇರಿ ಎಂದು ಸರ್ಕಾರ ಹೇಳಿದ ಬುದ್ಧಿ ಮಾತು ಕೇಳದೆ ಈಗ ಬಂಧನಕ್ಕೆ ಒಳಗಾದವರ ಸಂಖ್ಯೆ ಜಿಲ್ಲೆಯಲ್ಲಿ 133ಕ್ಕೆ ಏರಿದೆ.

ಸುರಕ್ಷತಾ ವಿಧಾನ ಅನುಸರಿಸದೆ ಕಾನೂನು ಉಲ್ಲಂಘಿಸುತ್ತಾ ಪೊಲೀಸರಿಗೆ ತಲೆ ನೋವಾಗಿರುವಂಥವರ ವಿರುದ್ಧ ಕಠಿಣ ಕ್ರಮಕ್ಕೆ ಈಗ ಜಿಲ್ಲಾಡಳಿತ ಮುಂದಾಗಿದ್ದು, ಈವರೆಗೆ 94 ಪ್ರಕರಣಗಳನ್ನು ದಾಖಲಿಸಿ, 82 ವಾಹನಗಳನ್ನು ಜಫ್ತಿ ಮಾಡಿಕೊಳ್ಳಲಾಗಿದೆ ಎಂದು ಡಿಸಿ ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ ತಿಳಿಸಿದ್ದಾರೆ.

ತೀರಾ ಅಗತ್ಯ ವಸ್ತುಗಳಿಗೆ ಸಂಬಂಧಿಸಿದಂತೆ ನೀಡಿರುವ ವಿನಾಯಿತಿಯನ್ನು ಹಲವರು ದುರ್ಬಳಕೆ ಮಾಡಿಕೊಳ್ಳುತ್ತಿರುವುದರಿಂದ ಕಠಿಣ ಕ್ರಮ ಅನಿವಾರ್ಯ. ಜಿಲ್ಲೆಯ ಗಡಿಭಾಗಗಳು ಸೇರಿ ಜಿಲ್ಲಾದ್ಯಂತ 20ಕ್ಕೂ ಹೆಚ್ಚು ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ ಎಂದು ಹೇಳಿದ್ದಾರೆ.

ಫಿವರ್ ಕ್ಲಿನಿಕ್ ಕಾರ್ಯಾರಂಭ: ಮುಂಜಾಗ್ರತಾ ಕ್ರಮವಾಗಿ ಸಾಮಾನ್ಯ ಜ್ವರದಿಂದ ಬಳಲುತ್ತಿರುವವರ ತಪಾಸಣೆಗಾಗಿ ಜಿಲ್ಲಾದ್ಯಂತ 12 ಫಿವರ್ ಕ್ಲಿನಿಕ್‌ಗಳನ್ನು ಪ್ರಾರಂಭಿಸಲಾಗಿದ್ದು, ಈವರೆಗೆ ಒಟ್ಟು 62 ಜನರು ಈ ಕ್ಲಿನಿಕ್‌ಗಳಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಂಡಿದ್ದಾರೆ. ಜ್ವರ ಕಂಡು ಬಂದಲ್ಲಿ ಕೂಡಲೇ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ಅನುಕೂಲವಾಗುವಂತೆ ಕ್ಲಿನಿಕ್‌ಗಳನ್ನು ಪ್ರಾರಂಭಿಸಲಾಗಿದೆ.

ಐಮಂಗಲದಲ್ಲಿ ಅತೀ ಹೆಚ್ಚು 46 ಜನರ ಆರೋಗ್ಯ ತಪಾಸಣೆ ಮಾಡಿಸಿಕೊಂಡಿದ್ದಾರೆ. ಚಿತ್ರದುರ್ಗ ಎಸ್‌ಜೆಎಂ ಕಲಾ ಕಾಲೇಜಿನ- 4, ಬಸವೇಶ್ವರ ಹಾಸ್ಪಿಟಲ್‌ನಲ್ಲಿ 6 ಹಾಗೂ ಭೀಮಸಮುದ್ರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 7 ಜನರು ಆರೋಗ್ಯ ತಪಾಸಣೆ ಮಾಡಿಸಿಕೊಂಡಿದ್ದಾರೆಂದು ನೋಡಲ್ ಅಧಿಕಾರಿ ಜಿ.ಸವಿತಾ ತಿಳಿಸಿದ್ದಾರೆ.

ತರಕಾರಿ ಮಾರುಕಟ್ಟೆ: ಸೋಮವಾರ ಶ್ರೀ ಜಯದೇವ ಮುರುಘಾ ರಾಜೇಂದ್ರ ಮಾರುಕಟ್ಟೆ ಮೈದಾನ ಹಾಗೂ ಹಳೆ ಮಾಧ್ಯಮಿಕ ಶಾಲಾ ಮೈದಾನದಲ್ಲೂ ಸಗಟು ಮಾರುಕಟ್ಟೆಯನ್ನು ಆರಂಭಿಸಲಾಯಿತು. ನಗರದ ತಿಪ್ಪಜ್ಜಿ ಸರ್ಕಲ್,ಸಂತೆಹೊಂಡ,ಆರ್‌ಟಿಒ ಕಚೇರಿ,ಸ್ಟೇಡಿಯಂ,ತ್ಯಾಗರಾಜ ಮಾರುಕಟ್ಟೆ,ಹೊಳಲ್ಕೆರೆ ರಸ್ತೆ ಮೊದಲಾದೆಡೆ ತರಕಾರಿ ಚಿಲ್ಕರೆ ಮಾರಾಟಕ್ಕೆ ಕೆಲ ಕಾಲ ಅವಕಾಶ ಮಾಡಿಕೊಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net