

ಚಿತ್ರದುರ್ಗ: ದಕ್ಷಿಣಾಯಣದಿಂದ ಉತ್ತರಾಯಣದೆಡೆ ಸೂರ‌್ಯದೇವರು ಪಥ ಬದಲಿಸುವ ಪುಣ್ಯಕಾಲ ಬುಧವಾರ ನಗರದ ನಾನಾ ದೇವಾಲಯಗಳಲ್ಲಿ ಹಲವು ಧಾರ್ಮಿಕ ವಿಧಿಗಳೊಂದಿಗೆ ವಿಶೇಷ ಪೂಜೆಗಳು ನೆರವೇರಿದವು.
ವಿವಿಧ ದೇಗುಲಗಳಲ್ಲಿ ಮುಂಜಾನೆ 4 ಗಂಟೆಯಿಂದಲೇ ಅಭಿಷೇಕ, ವಿಶೇಷ ಅಲಂಕಾರ, ಪೂಜೆ, ಮಂಗಳಾರತಿ ನೆರವೇರಿಸಿ, ರಾತ್ರಿ 9-10 ಗಂಟೆವರೆಗೂ ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆದರು. ಈ ವೇಳೆ ಹಲವು ದೇಗುಲಗಳಲ್ಲಿ ಭಕ್ತರಿಗೆ ಪ್ರಸಾದ ವಿನಿಯೋಗವಿತ್ತು.
ಜೋಗಿಮಟ್ಟಿ ರಸ್ತೆ ತ್ರಿಪುರ ಸುಂದರಿ ತಿಪ್ಪಿನಘಟ್ಟಮ್ಮ ದೇವಿಯನ್ನು ವಿವಿಧ ಹೂವು, ಹೊಂಬಾಳೆ ಹಾಗೂ ಕಬ್ಬಿನ ಜಲ್ಲೆಗಳಿಂದ ಸಿಂಗರಿಸಲಾಗಿತ್ತು. ದೇವಾಲಯ ಹೊರ ಮತ್ತು ಒಳ ಆವರಣವನ್ನು ಸೇವಂತಿಗೆ, ಮಲ್ಲಿಗೆ ಹಾಗೂ ಬಣ್ಣ ಬಣ್ಣದ ಕೃತಕ ಹೂವುಗಳಿಂದ ಅಲಂಕರಿಸಲಾಗಿತ್ತು.
ಕೋಟೆ ಬನಶಂಕರಿ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿ ಅಂಗವಾಗಿ ದೇವಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಬೃಹದಾಕಾರದ ಹಾರ, ಗುಲಾಬಿ, ಹೊಂಬಾಳೆ ಹಾಗೂ ನಿಂಬೆಹಣ್ಣಿನ ಹಾರಗಳಿಂದ ಪೂಜೆ ಸಲ್ಲಿಸಲಾಯಿತು. ನೂರಾರು ಭಕ್ತರು ಆಗಮಿಸಿ ಅಮ್ಮನ ದರ್ಶನ ಪಡೆದರು.
ಹೊಳಲ್ಕೆರೆ ರಸ್ತೆ ಬರಗೇರಮ್ಮ ದೇವಾಲಯದಲ್ಲಿ ದೇವಿಯನ್ನು, ಇದೇ ಪ್ರಥಮ ಬಾರಿಗೆ ಐದು ಅಶ್ವಗಳರಥದಲ್ಲಿ ನಿಂತಿರುವ ಸೂರ್ಯ ನಾರಾಯಣಸ್ವಾಮಿ ಮಾದರಿ ಅಲಂಕರಿಸಲಾಗಿತ್ತು. ದೇಗುಲದ ಆವರಣ ಕೂಡ ಪುಷ್ಪ, ದೀಪಾಲಂಕಾರಗಳಿಂದ ಕಂಗೊಳಿಸಿತು. ದೇಗುಲದ ಮುಂಭಾಗ ಜೋಡೆತ್ತು, ಕರು, ಗ್ರಾಮೀಣ ಸೊಗಡಿನ ಅಲಂಕಾರ ಮನ ಸೆಳೆಯಿತು.
ಅಧಿದೇವತೆ ಏಕನಾಥೇಶ್ವರಿ ದೇವಿ ದೇಗುಲದಲ್ಲಿ ಮುಂಜಾನೆ ನಾಲ್ಕರಿಂದಲೇ ವಿಶೇಷ ಪೂಜೆ ಜರುಗಿತು. ಸಾವಿರಾರು ಭಕ್ತರು ಕೋಟೆ ಏರಿ ಪೂಜೆ ಸಲ್ಲಿಸಿದರು.
ಮೇಲುದುರ್ಗದ ಹಿಂಡಬೇಶ್ವರ, ಸಂಪಿಗೆ ಸಿದ್ದೇಶ್ವರ, ಕಾಶಿ ವಿಶ್ವೇಶ್ವರ, ವೇಣುಗೋಪಾಲ ಸ್ವಾಮಿ, ಬೆಟ್ಟದ ಗಣಪತಿ, ಆಂಜನೇಯ,ನಗರದ ಉಚ್ಚಂಗಿ ಯಲ್ಲಮ್ಮ, ಗೌರಸಂದ್ರ ಮಾರಮ್ಮ, ಕೆಳಗೋಟೆಯ ಕೊಲ್ಲಾಪುರದ ಲಕ್ಷ್ಮೀ, ಸಂತೆ ಹೊಂಡ ಬಳಿಯ ಬನ್ನಿ ಮಹಾಕಾಳಿ, ಶ್ರೀ ನೀಲಕಂಠೇಶ್ವರ ಸ್ವಾಮಿ, ಶ್ರೀ ವೆಂಕಟರಮಣ, ಜೆಸಿಆರ್ ಬಡಾವಣೆ ಗಣಪತಿ, ಬುರುಜನಹಟ್ಟಿ ತಗ್ಗಿನ ಆಂಜನೇಯ ಸ್ವಾಮಿ, ಕಣಿವೆ ಮಾರಮ್ಮ, ಅಂತರಘಟ್ಟಮ್ಮ ಹಾಗೂ ಅನ್ನಪೂರ್ಣೇಶ್ವರಿ ಮೊದಲಾದ ದೇವಾಲಯಗಳಲ್ಲಿ ವಿಶೇಷ ಪೂಜೆ ಜರುಗಿದವು. ಸಂಜೆ ವೇಳೆ ಸಂಭ್ರದಿಂದ ಎಳ್ಳು ಬೀರುವುದು ಕಂಡು ಬಂತು.