ಮತಗಟ್ಟೆಗಳಂತಾದ ಪರೀಕ್ಷಾ ಕೇಂದ್ರಗಳು!

CTD 25 SSLC
Published on

ಚಿತ್ರದುರ್ಗ: ಶಾಲಾವರಣ ಸುತ್ತುವರಿದಿದ್ದ ಬ್ಯಾರಿಕೇಡ್‌ಗಳು, ಥರ್ಮಲ್ ಸ್ಕ್ರೀನಿಂಗ್, ಕೈಗಳಿಗೆ ಸ್ಯಾನಿಟೈಸರ್ ಹಾಕಿಸಿಕೊಳ್ಳುತ್ತಲೇ ಹೆಜ್ಜೆ ಹಾಕುವ ವಿದ್ಯಾರ್ಥಿಗಳು, ಪ್ರವೇಶ ದ್ವಾರದಲ್ಲೇ ಪೊಲೀಸ್ ಬಂದೋಬಸ್ತ್. ಧ್ವನಿವರ್ಧಕಗಳಲ್ಲಿ ಸೂಚನೆ ನೀಡುತ್ತಿದ್ದ ಸಿಬ್ಬಂದಿ…

ನಾವು ಬಂದಿರುವುದು ಮತಗಟ್ಟೆಗೋ, ಪರೀಕ್ಷೆಗೊ ಎಂಬಂತಹ ವಾತಾವರಣ. ಅಲ್ಲಿ ಮತಚೀಟಿ ಪರೀಕ್ಷಿಸುತ್ತಿದ್ದರೆ ಇಲ್ಲಿ ವಿದ್ಯಾರ್ಥಿಯ ಹಾಲ್‌ಟಿಕೆಟ್ ಜತೆಗೆ ಆರೋಗ್ಯದ ಪರಿಶೀಲನೆ ನಡೆಸಿ ಒಳಗೆ ಕಳುಹಿಸಲಾಗುತ್ತಿತ್ತು.

ಜಿಲ್ಲೆಯಾದ್ಯಂತ ಗುರುವಾರ ಆರಂಭವಾದ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಚಿತ್ರಣವಿದು. 87 ಕೇಂದ್ರಗಳಲ್ಲಿ ಮೊದಲ ದಿನ 20762 ವಿದ್ಯಾರ್ಥಿಗಳು ಪರೀಕ್ಷೆ ಬರೆದರೆ 1354 ಮಂದಿ ಗೈರಾದರು.

ಆಯಾ ಕೇಂದ್ರಗಳಲ್ಲಿ ಮಾರ್ಕಿಂಗ್ ಮಾಡಲಾಗಿತ್ತು. ನಿಗದಿಪಡಿಸಿದ ಕೊಠಡಿಗಳ ಬಗ್ಗೆ ಆಯಾ ಶಾಲಾ ಸಿಬ್ಬಂದಿ ಮಾರ್ಗದರ್ಶನ ನೀಡುತ್ತಿದ್ದರು. ಮೊಬೈಲ್ ಸ್ವಾಧೀನಾಧಿಕಾರಿಗಳು ಮೊಬೈಲ್ ವಶಕ್ಕೆ ಪಡೆದು ವಿದ್ಯಾರ್ಥಿಗಳನ್ನು ಒಳ ಬಿಡುತ್ತಿದ್ದರು. ಮೊದಲ ದಿನದ ದ್ವಿತೀಯ ಭಾಷಾ ಪರೀಕ್ಷೆ (ಇಂಗ್ಲಿಷ್/ ಕನ್ನಡ)ಗೆ ಅವಧಿಗೆ ಎರಡೂವರೆ ತಾಸಿಗೆ ಮುನ್ನವೇ ವಿದ್ಯಾರ್ಥಿಗಳು ಕೊಠಡಿ ಸೇರಿದ್ದರು.

ಮೂರು ತಿಂಗಳ ಬಳಿಕ ಶಾಲೆಗೆ ಬಂದ ವಿದ್ಯಾರ್ಥಿಗಳಲ್ಲಿ ಪರೀಕ್ಷೆಗಿಂತ ಕರೊನಾ ಚಿಂತೆಯೇ ಹೆಚ್ಚಾಗಿ ಕಾಡಿತು. ಮಕ್ಕಳ ತಪಾಸಣೆಗೆ ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತೆಯರನ್ನು ನಿಯೋಜಿಸಲಾಗಿತ್ತು.

ಭಾರತ್ ಸ್ಕೌಟ್ ಮತ್ತು ಗೈಡ್ ಸಂಸ್ಥೆಯಿಂದ ಮಾಸ್ಕ್ ನೀಡಲಾಯಿತು. ಸ್ಕೌಟ್-ಗೈಡ್ಸ್ ಮಾಸ್ಟರ್, ರೋವರ್ಸ್, ರೇಂಜರ್ಸ್‌ಗಳು ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸಿದರು. ಧ್ವನಿವರ್ಧಕ ಬಳಸಿ ಪರಸ್ಪರ ಅಂತರ ಕಾಪಾಡಿಕೊಳ್ಳುವಂತೆ ಸಲಹೆ ಸೂಚನೆ ನೀಡಲಾಗುತ್ತಿತ್ತು. ಶೀತ, ನೆಗಡಿ, ಜ್ವರ ಲಕ್ಷಣವಿದ್ದ ಮಕ್ಕಳಿಗೆ ಪ್ರತ್ಯೇಕ ಕೊಠಡಿ ನಿಗದಿಪಡಿಸಲಾಗಿತ್ತು.

ಜಿಪಂ ಅಧ್ಯಕ್ಷೆ ಶಶಿಕಲಾ ಸುರೇಶ್‌ಬಾಬು, ಸಿಇಒ ಟಿ.ಯೋಗೇಶ್, ಡಿಡಿಪಿಐ ಕೆ.ರವಿಶಂಕರ ರೆಡ್ಡಿ ಹಾಗೂ ಮತ್ತಿತರ ಅಧಿಕಾರಿಗಳು ನಾನಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮೊದಲ ದಿನವೇ ಇಲಾಖೆ ಪಾಸ್: ಪರಸ್ಪರ ಅಂತರ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಮೊದಲ ದಿನದಂದೇ ಇಲಾಖೆ ಪಾಸಾಗಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಒಂದು ಕೊಠಡಿಯಲ್ಲಿ 20 ಮಕ್ಕಳನ್ನು ಕೂರಿಸಲಾಗಿತ್ತು. ಅವರೊಂದಿಗೆ ಬಂದಿದ್ದ ಪಾಲಕರಿಗೆ ಗುಂಪು ಸೇರದಂತೆ ಮನವಿ ಮಾಡಿದ ಪೊಲೀಸರು ಹಾಗೂ ಶಿಕ್ಷಕರು, ಅವರನ್ನು ಅಲ್ಲಿಂದ ಚದುರಿಸಿದರು.

ಐವರಿಗೆ ಪ್ರತ್ಯೇಕ ಕೊಠಡಿ: ಕೇಂದ್ರಕ್ಕೆ ಪ್ರವೇಶಿಸುವ ವಿದ್ಯಾರ್ಥಿಗಳಿಗೆ ಮಾಸ್ಕ್, ಸ್ಯಾನಿಟೈಸರ್ ಹಾಗೂ ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯವಾಗಿತ್ತು. ಜ್ವರದ ಲಕ್ಷಣಗಳಿದ್ದ ಜಿಲ್ಲೆಯ ಎರಡು, ತಾಲೂಕಿನ ಎರಡು ಗ್ರಾಮಗಳ ಐವರು ವಿದ್ಯಾರ್ಥಿಗಳನ್ನು ಪ್ರತ್ಯೇಕ ಕೊಠಡಿಗಳಲ್ಲಿ ಕೂರಿಸಿ ಪರೀಕ್ಷೆ ಬರೆಸಲಾಯಿತು. ಸಾರಿಗೆ ಕೊರತೆ ಇರುವ ಪ್ರದೇಶಗಳಿಂದ ವಿದ್ಯಾರ್ಥಿಗಳನ್ನು ಕರೆತರಲು 197 ಖಾಸಗಿ ಶಾಲಾ ವಾಹನಗಳನ್ನು ಬಳಸಿಕೊಳ್ಳಲಾಗಿದೆ. ಪರೀಕ್ಷೆಗೆ ಪಾಲಕರು, ಖಾಸಗಿ ಶಿಕ್ಷಣ ಸಂಸ್ಥೆ, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಸಹಕರಿಸಿದ್ದಾರೆ ಎಂದು ಡಿಡಿಪಿಐ ರವಿಶಂಕರರೆಡ್ಡಿ ಪತ್ರಿಕೆಗೆ ಮಾಹಿತಿ ನೀಡಿದರು.

1354 ವಿದ್ಯಾರ್ಥಿಗಳು ಗೈರು: ಮೊದಲ ದಿನದ ಪರೀಕ್ಷೆಗೆ 20762 ವಿದ್ಯಾರ್ಥಿಗಳು ಹಾಜರಾಗಿದ್ದು, 1354 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಜಿಲ್ಲೆ ಹಾಗೂ ನೆರೆ ರಾಜ್ಯ ಹಾಗೂ ವಲಸೆ ವಿದ್ಯಾರ್ಥಿಗಳ ಸಹಿತ 22116 ವಿದ್ಯಾರ್ಥಿಗಳು ನೋಂದಣಿಯಾಗಿದ್ದರು. ಕಂಟೇನ್ಮೆಂಟ್ ಪ್ರದೇಶಗಳಿಂದ ಬಂದ 15 ವಿದ್ಯಾರ್ಥಿಗಳು ಹಾಗೂ ನೆರೆ ರಾಜ್ಯಗಳ 34 ಹಾಗೂ 349 ವಲಸೆ ವಿದ್ಯಾರ್ಥಿಗಳಲ್ಲಿ 339 ಮಂದಿ ಹಾಜರಾಗಿದ್ದರು. ಸರ್ಕಾರಿ ವಸತಿ ಶಾಲೆಗಳಲ್ಲಿ ಉಳಿದಿರುವ 131 ವಿದ್ಯಾರ್ಥಿಗಳು ಪರೀಕ್ಷೆ ಬರೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net