ದಶಕದ ನಂತರ ಸೇತುವೆ ನಿರ್ಮಾಣಕ್ಕೆ ಚಾಲನೆ

CTD MLA
Published on

ಚಿತ್ರದುರ್ಗ: ತಾಲೂಕಿನ ಮಹಾದೇವನಕಟ್ಟೆಯಿಂದ ಎಚ್.ಡಿ.ಪುರಕ್ಕೆ ಸಂಪರ್ಕ ಕಲ್ಪಿಸುವ ಅಂದಾಜು 4 ಕೋಟಿ ರೂ.ವೆಚ್ಚದ ಸೇತುವೆ ಕಾಮಗಾರಿಗೆ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಂಗಳವಾರ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ಸೇತುವೆಯಿಂದಾಗಿ ಮಹಾದೇವನಕಟ್ಟೆ ಗ್ರಾಮಸ್ಥರು ಎಚ್.ಡಿ.ಪುರಕ್ಕೆ ಸುತ್ತು ಹಾಕಿಕೊಂಡು ಹೋಗುವುದು ತಪ್ಪುತ್ತದೆ. ಈ ಹಿಂದೆ ಸೇತುವೆ ನಿರ್ಮಾಣಕ್ಕೆ ಅಂದಿನ ಸಿಎಂ ಎಸ್.ಎಂ.ಕೃಷ್ಣ ಹಾಗೂ ಅಂದಿನ ಲೋಕೋಪಯೋಗಿ ಸಚಿವರಾಗಿದ್ದ ಎಚ್.ಡಿ.ದೇವೇಗೌಡ ಹಾಗೂ ಅಂದಿನ ಶಾಸಕ ಏಕಾಂತಯ್ಯರ ಅವಧಿ ಗುದ್ದಲಿ ಪೂಜೆ ಆಗಿದ್ದರೂ ಕಾಮಗಾರಿ ನನೆಗುದಿಗೆ ಬಿದ್ದಿತ್ತು. ಈಗ ಕಾಮಗಾರಿ ನವೆಂಬರ್‌ವೊಳಗೆ ಪೂರ್ಣವಾಗಲಿದೆ.

ಮಳೆ ಬಂದಾಗ ಹಳ್ಳದಲ್ಲಿ ನೀರು ಹರಿಯುತ್ತಿದ್ದು, ಮಹಾದೇವನಕಟ್ಟೆಯವರು, ಎಚ್.ಡಿ.ಪುರಕ್ಕೆ ಹೋಗಬೇಕಾದರೆ ಚಿತ್ರಳ್ಳಿ ಮೂಲಕ ಹೋಗಬೇಕಿತ್ತು. ಹಳ್ಳ ಇಲ್ಲದ ಸಮಯದಲ್ಲೂ ಕಷ್ಟದಿಂದ ಸಂಚರಿಸುವಂತಾಗಿದ್ದು, ಸೇತುವೆ ನಿರ್ಮಾಣ ಪೂರ್ಣವಾದ ಬಳಿಕ ಸಂಚಾರ ಸುಗಮವಾಗಲಿದೆ ಎಂದರು. ಗ್ರಾಮಸ್ಥರಾದ ಮಹಾಲಿಂಗಪ್ಪ, ಪ್ರಕಾಶ್, ಕೆಂಗಣ್ಣ, ಕಕ್ಕೆರೆ ಚಂದ್ರು ಸೇರಿದಂತೆ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net