

ಚಿತ್ರದುರ್ಗ: ಹೊಸದುರ್ಗ ಸಾರ್ವಜನಿಕ ಆಸ್ಪತ್ರೆಯ ಯಾವುದೇ ವೈದ್ಯರಿಗೆ ಕೋವಿಡ್ ಸೋಂಕಿಲ್ಲ ಎಂದು ತಹಸಿಲ್ದಾರ್ ವೈ.ತಿಪ್ಪೇಸ್ವಾಮಿ ತಿಳಿಸಿದ್ದಾರೆ.
ಆಸ್ಪತ್ರೆ ವೈದ್ಯರು, ಸಿಬ್ಬಂದಿಗೆ ಸೋಂಕು ತಗುಲಿದೆ ಎಂಬುದು ಬರೀ ವದಂತಿ. ಇಂಥ ಊಹಾಪೋಹಗಳಿಗೆ ನಾಗರಿಕರು ಕಿವಿಗೊಡದಂತೆ ಮನವಿ ಮಾಡಿದ್ದಾರೆ.
ಹಿರಿಯೂರಿನ ವೈದ್ಯರೊಬ್ಬರು ಕಾರಿನಲ್ಲಿ ನಿತ್ಯ ಹಿರಿಯೂರಿನಿಂದ ತಾವು ಕರ್ತವ್ಯ ನಿರತವಾಗಿರುವ ಚಿಕ್ಕಮಗಳೂರು ಜಿಲ್ಲೆಗೆ ಹೋಗಿ ಬರುತ್ತಿದ್ದರು. ಈ ಹಿಂದೆ ಅವರಿಗೆ ಎರಡು ಬಾರಿ ನಡೆಸಿದ್ದ ಗಂಟಲು ದ್ರವದ ಪರೀಕ್ಷೆ ನೆಗೆಟಿವ್ ಬಂದಿತ್ತು. ಈಗ ಜ್ವರ ಕಾಣಿಸಿದ್ದರಿಂದಾಗಿ ಮಾರ್ಗ ಮಧ್ಯೆ ಹೊಸದುರ್ಗದ ಆಸ್ಪತ್ರೆಯಲ್ಲಿ ಮತ್ತೆ ಮಾಡಿಸಿದ್ದ ಗಂಟಲು ದ್ರವ ಮಾದರಿ ಪಾಸಿಟಿವ್ ಬಂದಿದೆ.
ಈಗ ಅವರನ್ನು ಚಿಕಿತ್ಸೆಗೆ ನಿಗದಿತ ಆಸ್ಪತ್ರೆಗೆಂದು ದಾಖಲಿಸಲಾಗಿದೆ. ಈ ವೈದ್ಯರ ಸಂಪರ್ಕಕ್ಕೆ ಬಂದ ವ್ಯಕ್ತಿಗಳ ಗಂಟಲು ದ್ರವ ಪರೀಕ್ಷೆ ನೆಗೆಟಿವ್‌ಬಂದಿದೆ. ಪ್ರಾಥಮಿಕ, ದ್ವಿತೀಯ ಸಂಪರ್ಕಿತರ ಪತ್ತೆ ಕಾರ್ಯ ನಡೆಯುತ್ತಿದೆ. ಆರೋಗ್ಯ ಇಲಾಖೆ ಸಂಪರ್ಕ ನೌಕರರನ್ನು ನಿಯ ಮಾನುಸಾರ ಕ್ವಾರಂಟೈನ್ ಮಾಡಲಾಗಿದೆ. ಆಸ್ಪತ್ರೆಯನ್ನು ಡಿಸ್‌ಇನ್ಫೆಕ್ಷನ್ ಮಾಡಲಾಗಿದೆ. ಸೋಂಕಿತರ ಸಂಪರ್ಕದಲ್ಲಿ ಯಾರಾದರೂ ಇದ್ದರೆ ಸ್ವಯಂ ಪ್ರೇರಿತವಾಗಿ ಗಂಟಲು ದ್ರವ ಪರೀಕ್ಷೆಗೆ ಒಳ ಪಡುವಂತೆ ತಹಸಿಲ್ದಾರ್ ಕೋರಿದ್ದಾರೆ.
ತರಬೇತಿ ಕಾರ್ಯಾಗ: ಚಿತ್ರದುರ್ಗ ಜಿಪಂ ಸಭಾಂಗಣದಲ್ಲಿ ಬುಧವಾರ ಆರೋಗ್ಯ ಇಲಾಖೆ ಆಯೋಜಿಸಿದ್ದ ಕೋವಿಡ್-19 ಸೋಂಕು ನಿಯಂತ್ರಣ ತರಬೇತಿ ಕಾರ್ಯಾಗಾರದಲ್ಲಿ ಜಿಪಂ ಅಧ್ಯಕ್ಷೆ ಶಶಿಕಲಾ ಸುರೇಶ್‌ಬಾಬು ಜಾಗೃತಿ ಭಿತ್ತಿಪತ್ರ ಬಿಡುಗಡೆ ಮಾಡಿದರು.
ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ಡಿಸಿ ಆರ್.ವಿನೋತ್ ಪ್ರಿಯಾ, ಸಿಇಒ ಟಿ.ಯೋಗೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಆರ್.ನರಸಿಂಹರಾಜ, ತಾಪಂ ಸದಸ್ಯ ತಿಮ್ಮಣ್ಣ, ಟಿಎಚ್‌ಒ ಡಾ.ಬಿ.ವಿ.ಗಿರೀಶ್ ಮತ್ತಿತರರು ಇದ್ದರು.