ಕೋವಿಡ್ ಆಸ್ಪತ್ರೆ ಮೂಲಸೌಲಭ್ಯಕ್ಕೆ 84 ಲಕ್ಷ ರೂ.ವಿನಿಯೋಗ

ctd 14 dm
Published on

ಚಿತ್ರದುರ್ಗ: ಕರೊನಾ ಸೋಂಕು ನಿಯಂತ್ರಣಕ್ಕೆ ಚಿತ್ರದುರ್ಗದ ಎಂಸಿಎಚ್ ಕಟ್ಟಡದಲ್ಲಿ ಸ್ಥಾಪಿಸಿರುವ ಕೋವಿಡ್-19 ಆಸ್ಪತ್ರೆಗೆ ಮೂಲ ಸೌಲಭ್ಯ ಕಲ್ಪಿಸಲು 26 ಲಕ್ಷ ರೂ. ಹಾಗೂ ಅಗತ್ಯ ಔಷಧ ಪೂರೈಸಲು 26 ಲಕ್ಷ ರೂ. ಸೇರಿ ಒಟ್ಟು 84 ಲಕ್ಷ ರೂ.ವ್ಯಯಿಸಲು ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ನೇತೃತ್ವದ ಸಭೆ ನಿರ್ಧರಿಸಿದೆ.

ಆಸ್ಪತ್ರೆಗೆ ಮೂಲ ಸೌಕರ್ಯ ಒದಗಿಸುವ ಜತೆಗೆ 26 ಲಕ್ಷ ರೂ.ವೆಚ್ಚದಲ್ಲಿ ವೆಂಟಿಲೇಟರ್,ಪಿಪಿಇ ಕಿಟ್, ಎನ್-95 ಮಾಸ್ಕ್, ಸ್ಯಾನಿಟೈಸರ್, ಆಕ್ಸಿಜನ್ ಪೂರೈಸಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಯಿತು.

ಡಿಎಚ್‌ಒ ಡಾ.ಸಿ.ಎಲ್.ಪಾಲಾಕ್ಷ ಜಿಲ್ಲೆಯ ಪರಿಸ್ಥಿತಿ ವಿವರಿಸಿ ಹೊರಗಿನಿಂದ ಜಿಲ್ಲೆಗೆ ಬಂದವರನ್ನು ಗುರುತಿಸಿ ಕ್ವಾರಂಟೈನ್‌ನಲ್ಲಿಡಲಾಗಿದೆ. ಪಾಸಿಟಿವ್ ಕಂಡು ಬಂದಿದ್ದ ಗ್ರಾಮದ 5 ಕಿ.ಮೀ.ವ್ಯಾಪ್ತಿಯಲ್ಲಿ 28 ದಿನ ನಿಗಾ ಇರಿಸಲಾಗಿದೆ ಎಂದರು.

ಲಾಕ್‌ಡೌನ್‌ನಿಂದ ಕೃಷಿ, ತೋಟಗಾರಿಕೆ ಚಟುವಟಿಕೆಗಳಿಗೆ ತೊಂದರೆ ಆಗಬಾರದು. ಕೃಷಿ ಉತ್ಪನ್ನಗಳ ಆನ್‌ಲೈನ್ ಮಾರಾಟ ಉತ್ತೇಜಿಸಬೇಕು. ಸಿನಿಮಾ ಮಂದಿರ ಸಹಿತ ಯಾವುದೇ ಕಾರ್ಮಿಕರಿಗೆ ತೊಂದರೆ ಆಗಬಾರದೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

ಡಯಾಲಿಸಿಸ್ ರೋಗಿಗಳಿಗೆ ಯಾವುದೇ ತೊಂದರೆ ಆಗದಂತೆ ಒಂದು ತಿಂಗಳಿಗೆ ಅಗತ್ಯವಿರುವ ಔಷಧ ಖರೀದಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ ಹೇಳಿದರು.

71 ಕೋಟಿ ಪರಿಹಾರ: 2019-20ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆಯಡಿ ಜಿಲ್ಲೆಗೆ 71.23 ಕೋಟಿ ರೂ. ಪರಿಹಾರ ಬಂದಿದೆ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ತಿಳಿಸಿದರು. 2019ರ ಮುಂಗಾರು ಮಳೆ ವಿಫಲವಾದರೆ ಶೇ.25 ಪರಿಹಾರದಂತೆ ಜಿಲ್ಲೆಯ 52214 ರೈತರಿಗೆ ಪರಿಹಾರ ದೊರಕಿದೆ ಎಂದರು.

ಜಿಲ್ಲೆಯ 1637ರೈತರಿಗೆ ಇನ್ನೂ 2.15 ಕೋಟಿ ರೂ.ಬರಬೇಕಿದೆ ಎಂದು ಜಂಟಿ ಕೃಷಿ ನಿರ್ದೇಶಕ ಡಾ.ವಿ.ಸದಾಶಿವ ತಿಳಿಸಿದರು.

ಲಾಕ್‌ಡೌನ್ ಅಗತ್ಯಕ್ಕಾಗಿ 65 ಮೆಗಾ ಫೋನ್,120 ಟಾರ್ಚ್,600 ಬ್ಯಾರಿಕೇಡ್. 30 ವಾಹನಗಳ ಅಗತ್ಯವಿದೆ ಎಂದು ಎಸ್ಪಿ ಜಿ.ರಾಧಿಕಾ ಹೇಳಿದರು. ಸೋಂಕಿನ ವಿರುದ್ಧ ಜಾಗೃತಿಗೆ ಪ್ರತಿ ಗ್ರಾಮದಲ್ಲಿ ಗ್ರಾಮ ಸೈನಿಕರನ್ನು ನೇಮಿಸಲಾಗಿದೆ ಎಂದು ಜಿಪಂ ಸಿಇಒ ಎಸ್.ಹೊನ್ನಾಂಬ ಹೇಳಿದರು. ಎಡಿಸಿ ಸಿ.ಸಂಗಪ್ಪ, ಎಸಿ ವಿ.ಪ್ರಸನ್ನ, ಜಿಲ್ಲಾ ಸರ್ಜನ್ ಡಾ.ಎಚ್.ಜೆ. ಬಸವರಾಜಪ್ಪ ಮೊದಲಾದ ಅಧಿಕಾರಿಗಳಿದ್ದರು.

(ಸಿಟಿಡಿ 14 ಡಿಎಂ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net