ಚಿತ್ರದುರ್ಗ ಕೆಎಸ್‌ಆರ್‌ಟಿಸಿಯಿಂದ ಕರೊನಾ ಜಾಗೃತಿ

CTD 7 KSRTC CARONA
Published on

ಚಿತ್ರದುರ್ಗ: ಮೊಬೈಲ್ ಕಂಪನಿಗಳು ಕಾಲರ್ ಟ್ಯೂನ್‌ಗಳ ಮೂಲಕ ಕರೊನಾ ಕುರಿತು ಜಾಗೃತಿ ಮೂಡಿಸುತ್ತಿದ್ದರೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವೂ ಶುಚಿತ್ವದ ಮೂಲಕ ಪ್ರಯಾಣಿರಲ್ಲಿ ಅರಿವು ಮೂಡಿಸಲು ಮುಂದಾಗಿದೆ.

ಡಿಪೋಗಳಲ್ಲಿ ಸಭೆ ನಡೆಸಿ ಕರೊನಾ, ಇತರೆ ಸಾಂಕ್ರಾಮಿಕ ರೋಗಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸುವಂತೆ ಪ್ರಯಾಣಿಕರಿಗೆ ನಿಗಮದ ಅಧಿಕಾರಿ, ಸಿಬ್ಬಂದಿ ಮನವಿ ಮಾಡುತ್ತಿದ್ದಾರೆ.

ಈ ಪ್ರಯತ್ನಕ್ಕೆ ಆರೋಗ್ಯ ಇಲಾಖೆಯೂ ಕೈ ಜೋಡಿಸಿದ್ದು ಕರೊನಾ ಸೋಂಕಿನ ಲಕ್ಷಣ, ಅಗತ್ಯ ಮುನ್ನೆಚ್ಚರಿಕೆ, ಚಿಕಿತ್ಸೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.

ಕರೊನಾದ ಬಗ್ಗೆ ಅನಗತ್ಯ ಭೀತಿ ಬೇಡ. ಈ ವೈರಸ್ ಕರ್ನಾಟಕದಲ್ಲಿ ಕಂಡು ಬಂದಿಲ್ಲ. ಆದರೂ ಮುನ್ನೆಚ್ಚರಿಕೆ ವಹಿಸಿ. ಆರೋಗ್ಯ ಇಲಾಖೆ ಸೂಚನೆ ಪಾಲಿಸಿ ಎಂದು ತಿಳಿಸಲಾಗುತ್ತಿದೆ.

ನಿತ್ಯ ಬಸ್‌ಗಳ ಸ್ವಚ್ಛತೆಗೆ ಸೂಚನೆ: ಚಿತ್ರದುರ್ಗ ವಿಭಾಗ ವ್ಯಾಪ್ತಿಯ ಚಳ್ಳಕೆರೆ, ಚಿತ್ರದುರ್ಗ, ಹೊಸದುರ್ಗ, ಪಾವಗಡ ಡಿಪೋಗಳಲ್ಲಿ 260ಕ್ಕೂ ಹೆಚ್ಚು ಬಸ್‌ಗಳಿದ್ದು, ನಿತ್ಯ ಶುಚಿಗೊಳಿಸಲು ನಿಗಮದ ಅಧಿಕಾರಿಗಳು ಸೂಚಿಸಿದ್ದಾರೆ.

ಚಿತ್ರದುರ್ಗ ಡಿಪೋದಲ್ಲಿ ಜಾಗೃತಿ: ಚಿತ್ರದುರ್ಗ ಡಿಪೋದಲ್ಲಿ ಶುಕ್ರವಾರ ಸಂಜೆ ಸಭೆ ನಡೆಸಿ ಕರೊನಾ ಸೋಂಕು ಕುರಿತು ಜಾಗೃತಿ ಮೂಡಿಸಲಾಯಿತು. ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಜಿ.ವಿಜಯಕುಮಾರ್, ವಿಭಾಗೀಯ ಸಂಚಲನ ಅಧಿಕಾರಿ ಚನ್ನಬಸಪ್ಪ, ಕಾರ್ಮಿಕ ಕಲ್ಯಾಣಾಧಿಕಾರಿ ರಾಜಶೇಖರ್ ಕುಂಬಾರ, ವ್ಯವಸ್ಥಾಪಕ ಎಂ.ಹೊನ್ನಪ್ಪ, ಆರೋಗ್ಯ ಇಲಾಖೆ ಅಧಿಕಾರಿಗಳಾದ ಹನುಮಂತಪ್ಪ, ಗಂಗಾಧರ್ ಇದ್ದರು.

ಕೆಎಸ್‌ಆರ್‌ಟಿಸಿ ಚಿತ್ರದುರ್ಗ ವಿಭಾಗೀಯ ನಿಯಂತ್ರಣಾಧಿಕಾರಿ ಜಿ.ವಿಜಯಕುಮಾರ್ ಹೇಳಿಕೆ: ಬಸ್ ನಿಲ್ದಾಣ, ವಾಹನಗಳ ಶಚಿತ್ವ ಕಾಪಾಡಲು ತಾಕೀತು ಮಾಡಲಾಗಿದೆ. ಸಿಬ್ಬಂದಿಗೂ ಆರೋಗ್ಯ ಬಗ್ಗೆ ಕಾಳಜಿ ವಹಿಸಲು ಸೂಚಿಸಲಾಗಿದೆ. ಕರೊನಾ ಕುರಿತಂತೆ ಪ್ರಯಾಣೀಕರ ಜಾಗೃತಿಗೆ ನಿಲ್ದಾಣಗಳಲ್ಲಿ ಪ್ರಕಟಣೆ ಪ್ರಸಾರ ಮಾಡಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net