

ಚಿತ್ರದುರ್ಗ: ಮುರುಘ ರಾಜೇಂದ್ರ ಮಠದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಂಜಾರ ಮತ್ತು ಲಿಂಗಾಯತ ಸಮಾಜಕ್ಕೆ ಸೇರಿದ ಇಬ್ಬರು ಯುವಕರಿಗೆ ಶ್ರೀ ಶಿವಮೂರ್ತಿ ಮುರುಘಾ ಶರಣರು ಲಿಂಗದೀಕ್ಷೆ ನೀಡಿದರು.
ಬಂಜಾರ ಸಮಾಜದ ರೇಷ್ಮಾಬಾಯಿ-ಶ್ರೀನಿವಾಸ ನಾಯಕ ದಂಪತಿ ಮಗ ನಂದಾಮಸಂದ್ (12 ವರ್ಷ) ಹಾಗೂ ಚಿಕ್ಕನಾಯಕನಹಳ್ಳಿ ತಾಲೂಕು ಸಾಸಲಿನ ಲಿಂಗಾಯತ ಸಮಾಜ ಮಂಜುಳಮ್ಮ-ಚನ್ನಬಸವಯ್ಯ ದಂಪತಿ ಪುತ್ರ ನಿಂಗರಾಜು ಶರಣರಿಂದ ಲಿಂಗ ದೀಕ್ಷೆ ಪಡೆದರು.
ಈ ವೇಳೆ ಮಾತನಾಡಿದ ಶ್ರೀಗಳು, ಶರಣ ಸಂಸ್ಕೃತಿ, ಕಾಯಕದ ಮೇಲೆ ಶ್ರದ್ಧೆಯಿಂದಾಗಿ ಲಿಂಗ ಸಂಸ್ಕಾರ ಬಯಸುವ ನೂರಾರು ಸಾಧಕರಿಗೆ ಲಿಂಗದೀಕ್ಷೆ ಮಾಡಿರುವುದು ಮಠದ ಹೆಮ್ಮೆ ಕಾರ್ಯ ಎಂದರು.
ಲಿಂಗದೀಕ್ಷೆ ಪಡೆದಿರುವ ವಟುಗಳು ಉತ್ತಮ ವಿದ್ಯಾಭ್ಯಾಸ, ಬಸವತತ್ತ್ವವನ್ನು ಕಲಿತು ಸಮುದಾಯಕ್ಕೆ ದಾರಿ ತೋರಿಸಬೇಕು. ಇಬ್ಬರು ಮಠದಲ್ಲಿ ಇದ್ದುಕೊಂಡು ವಿದ್ಯಾಭ್ಯಾಸ ಮಾಡುತ್ತ, ಹೆಚ್ಚಿನದನ್ನು ಗುರುಕುಲದಲ್ಲಿ ಕಲಿತು ಬಸವಾದಿ ಶರಣರ ಪರಂಪರೆ, ತತ್ತ್ವ ಸಿದ್ಧಾಂತಗಳನ್ನು ಸಮಾಜಕ್ಕೆ ಮತ್ತಷ್ಟು ಪರಿಚಯಿಸಬೇಕು. ಉತ್ತಮ ಸಾಧನೆಗಳನ್ನು ಮಾಡಿ ಮೌಢ್ಯತೆ ದೂರ ಮಾಡಬೇಕು ಎಂದು ತಿಳಿಸಿದರು.
ಬಂಜಾರ ಮಠದ ಕಾರ್ಯಾಧ್ಯಕ್ಷ ರಾಜಾನಾಯ್ಕ, ಉಪಾಧ್ಯಕ್ಷ ಜೆ.ಮಾಧವನಾಯ್ಕ, ಪ್ರಧಾನ ಕಾರ್ಯದರ್ಶಿ ಕೆ.ಮಂಜುನಾಥ ನಾಯ್ಕ, ಎಂ.ಕುಸಾದ್ ಬಾವಾಜಿ, ಸುಮಿತ್‌ಕುಮಾರ್, ಎಸ್.ಜೆ.ಎಂ.ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ.ಪರಮಶಿವಯ್ಯ, ಕಾರ್ಯನಿರ್ವ ಹಣಾಧಿಕಾರಿ ಎಂ.ಜಿ.ದೊರೆಸ್ವಾಮಿ, ಆರ್.ಲಿಂಗರಾಜು ಮತ್ತಿತರರು ಉಪಸ್ಥಿತರಿದ್ದರು.