

ಚಿತ್ರದುರ್ಗ: ಮೂಕರ್ಜಿ ಆಧರಿಸಿ ನೌಕರರ ವಿಚಾರಣೆ ನಡೆಸದಂತೆ ಸರ್ಕಾರದಿಂದ ಆದೇಶ ಮಾಡಿಸಿರುವುದಾಗಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಹೇಳಿದರು.
ನಗರದ ಕಮ್ಮಾರಡ್ಡಿ ಸಮುದಾಯ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಸಂವಾದದಲ್ಲಿ ಮಾತನಾಡಿದರು.
ಅನಾಮಧೇಯ ದೂರು, ಕಿರುಕುಳದ ಹಿನ್ನೆಲೆಯಲ್ಲಿ ಮಾಹಿತಿ ಕೇಳುವುದರಿಂದಾಗಿ ಅನೇಕ ನೌಕರರು ರೋಸಿದ್ದಾರೆ. ನಾನೂ ಕೂಡ ಅಪವಾದಗಳನ್ನು ಎದುರಿಸಿದ್ದೇನೆ. ಈ ಹಿನ್ನೆಲೆಯಲ್ಲಿ ಮೂಕರ್ಜಿಗಳ ಆಧಾರದಲ್ಲಿ ಸರ್ಕಾರ ವಿಚಾರಣೆ ನಡೆಸುವಂತಿಲ್ಲ ಎಂದರು.
ನೌಕರರ ಮಕ್ಕಳಿಗೆ ನೀಡುತ್ತಿದ್ದ ಪುರಸ್ಕಾರ ಸಂಖ್ಯೆಯನ್ನು ಹತ್ತು ಸಾವಿರಕ್ಕೆ ಏರಿಸಲು ಸಂಘ ಚಿಂತನೆ ನಡೆಸಿದೆ. ಮೃತ ನೌಕರರ ಅಂತ್ಯಸಂಸ್ಕಾರಕ್ಕೆ ನೀಡುತ್ತಿದ್ದ ಮೊತ್ತವನ್ನು 15 ಸಾವಿರ ರೂ.ಗೆ ಏರಿಸುವುದಾಗಿ ಸಿಎಂ ಘೋಷಿಸಿದ್ದಾರೆ.
ನೌಕರರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಜಿಲ್ಲಾವಾರು ಮೂರು ತಿಂಗಳಿಗೊಮ್ಮೆ ಡಿಸಿ, ಎಸ್ಪಿ, ಜಿ.ಪಂ. ಸಿಇಒ ಹಾಗೂ ಸಂಘದ ಜಿಲ್ಲಾಧ್ಯಕ್ಷರ ಜಂಟಿ ಸಭೆ ನಡೆಯಲಿದೆ. ಸರ್ಕಾರದ ಯೋಜನೆಗಳನ್ನು ಕಟ್ಟಕಡೆಯ ವ್ಯಕ್ತಿಗೆ ತಲುಪಿಸಿ. ಆತ್ಮವಂಚನೆಯಿಲ್ಲದೆ ಕೆಲಸ ಮಾಡಿ. ಲಂಚದ ಸಹವಾಸ ಬೇಡವೆಂದು ಎಚ್ಚರಿಸಿದರು.
ಕಾರ‌್ಯಕ್ರಮ ಉದ್ಘಾಟಿಸಿದ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ಚಿತ್ರದುರ್ಗದಲ್ಲಿ ಬ್ಯಾಂಕ್, ಗೃಹನಿರ್ಮಾಣ, ಸಮದಾಯ ಭವನ ನಿರ್ಮಿಸುವ ಉದ್ದೇಶಕ್ಕೆ ಶಾಸಕರ ನಿಧಿಯಿಂದ ನೆರವು ನೀಡಲಿದ್ದೇನೆ. ರಾಜ್ಯ ಸರ್ಕಾರದಿಂದ ಒಂದು ಕೋಟಿ ರೂ.ಅನುದಾನ ಪಡೆಯಿರಿ ಎಂದು ಹೇಳಿದರು.
ಜಿಲ್ಲಾ ಅಧ್ಯಕ್ಷ ಕೆ.ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ರಾಜ್ಯದ ಸಂಘದ ಗೌರವಾಧ್ಯಕ್ಷ ಶಿವರುದ್ರಯ್ಯ, ಪ್ರಧಾನ ಕಾರ್ಯದರ್ಶಿ ಜಗದೀಶ್‌ಗೌಡ ಪಾಟೀಲ್, ಖಜಾಂಚಿ ಆರ್.ಶ್ರೀನಿವಾಸ್, ವಿಭಾಗೀಯ ಉಪಾಧ್ಯಕ್ಷ ಮೋಹನ್, ಪ್ರಧಾನ ಕಾರ‌್ಯದರ್ಶಿ ಪ್ರದೀಪ್‌ಕುಮಾರ್, ಖಜಾಂಚಿ ವೀರೇಶ್, ದಾವಣಗೆರೆ ಸಂಘದ ಅಧ್ಯಕ್ಷ ಪಾಲಾಕ್ಷ, ಬಳ್ಳಾರಿ ಸಂಘದ ಅಧ್ಯಕ್ಷ ಶಿವಾಜಿರಾವ್, ನಿಕಟ ಪೂರ್ವ ಜಿಲ್ಲಾಧ್ಯಕ್ಷ ಕೆ.ಜೆ.ಜಗದೀಶ್, ತಿಮ್ಮಾರೆಡ್ಡಿ ಹಾಗೂ ಪದಾಧಿಕಾರಿಗಳಿದ್ದರು.