ಕಲ್ಯಾಣ ಮಂಡಳಿ ನಿಧಿ ಕಾರ್ಮಿಕರಿಗೆ ದಕ್ಕಲಿ

CTD 21 karmika PROTEST
Published on

ಚಿತ್ರದುರ್ಗ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಕಟ್ಟಡ ಹಾಗೂ ಇತರೆ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ನೂರಾರು ಕಾರ್ಮಿಕರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಹಳೆಯ ಮಾಧ್ಯಮಿಕ ಶಾಲಾ ಮೈದಾನದಿಂದ ಡಿಸಿ ಕಚೇರಿವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಒನಕೆ ಓಬವ್ವ ವೃತ್ತದಲ್ಲಿ ಮಾನವ ಸರಪಳಿ ರಚಿಸಿದರು.

ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ, ಹೆಸರು ನೋಂದಾಯಿಸಿದ ಅರ್ಹ ಕಟ್ಟಡ ಕಾರ್ಮಿಕರಿಗೆ ಸೌಲಭ್ಯ ಒದಗಿಸಬೇಕು. 13 ವರ್ಷಗಳಿಂದ ಅರ್ಹರಿಗೆ ಸಹಾಯಧನ ನೀಡಿಲ್ಲ. ಮಂಡಳಿಯಲ್ಲಿ 8 ಸಾವಿರ ಕೋಟಿ ರೂ. ಕಟ್ಟಡ ನಿರ್ಮಾಣದ ಸೆಸ್ ಸಂಗ್ರಹ ವಾಗಿದ್ದರೂ, ಅದರ ಶೇ.10 ಮೊತ್ತವೂ ಕಾರ್ಮಿಕರ ಒಳಿತಿಗೆ ಖರ್ಚಾಗಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.

ಮಂಡಳಿಯಲ್ಲಿ ಹೆಸರು ನೋಂದಾಯಿಸಲು ಅಡ್ಡಿಯಾಗಿರುವ ಸರ್ವರ್ ಸಮಸ್ಯೆ ನೀಗಿಸಬೇಕು. ಕಾರ್ಮಿಕರ ಸಹಜ ಸಾವಿಗೆ 5 ಲಕ್ಷ, ಅಪಘಾತದಲ್ಲಿ ಮೃತಪಟ್ಟ ಕಾರ್ಮಿಕರ ಕುಟುಂಬದವರಿಗೆ 10 ಲಕ್ಷ ರೂ. ಧನ ಸಹಾಯಧನ ನೀಡುವುದೂ ಸೇರಿ ಹಲವು ಬೇಡಿಕೆಗಳುಳ್ಳ ಮನವಿ ಪತ್ರವನ್ನು ಡಿಸಿ ಆರ್.ವಿನೋತ್‌ಪ್ರಿಯಾ ಅವರಿಗೆ ಸಲ್ಲಿಸಿದರು.

ಇದಕ್ಕೂ ಮೊದಲು ಸ್ಥಳಕ್ಕೆ ಆಗಮಿಸಿದ್ದ ಕಾರ್ಮಿಕ ಇಲಾಖೆ ಅಧಿಕಾರಿಗಳು ಬೇಡಿಕೆಗಳ ಕುರಿತಂತೆ ಕಾರ್ಮಿಕ ಮುಖಂಡರೊಂದಿಗೆ ಚರ್ಚಿಸಿದರು.

ವೈ.ಕುಮಾರ್, ಕೆ.ಗೌಸಪೀರ್, ಎನ್.ರಮೇಶ್, ಡಿ.ಈಶ್ವರಪ್ಪ, ಜೆ.ಮಂಜುನಾಥ್, ಇಮಾಮ್ ಮೊಹಿಮುದ್ದೀನ್, ವೈ.ಬಸವರಾಜ್ ಸಹಿತ ಹಲವು ಕಾರ್ಮಿಕ ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net