ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳಕ್ಕೆ ಕಸರತ್ತು

CTD 12 RATRI- 2
Published on

ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ: ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡಲು ಶಿಕ್ಷಣ ಇಲಾಖೆ ವಿವಿಧ ಯೋಜನೆ ರೂಪಿಸಿದೆ.

‘ಅಡೆತಡೆ ನಿವಾರಿಸಿ, ಜ್ಞಾನದ ಕೋಟೆ ಕಟ್ಟುತ್ತೇವೆ’ ಎಂಬ ಘೋಷಣೆಯೊಂದಿಗೆ ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಗುಣಮಟ್ಟದ ಫಲಿತಾಂಶಕ್ಕಾಗಿ ಶಿಕ್ಷಣ ಇಲಾಖೆ ಸಜ್ಜಾಗಿದೆ.

ಕಳೆದ ಬಾರಿ ರಾಜ್ಯದಲ್ಲೇ 6ನೇ ಸ್ಥಾನದಲ್ಲಿದ್ದ ಜಿಲ್ಲೆ ಈ ಬಾರಿ ಇನ್ನೂ ಎತ್ತರಕ್ಕೆ ಏರುವ ಗುರಿ ಹೊಂದಿದೆ. ಈ ಹಿನ್ನೆಲೆಯಲ್ಲಿ ರಾತ್ರಿ ತರಗತಿ ನಡೆಸಲು ಯೋಜನೆ ರೂಪಿಸಿದೆ.

ಚಳ್ಳಕೆರೆ-10, ಹೊಸದುರ್ಗ-10 ಸೇರಿ ಜಿಲ್ಲೆಯ ವಿವಿಧೆಡೆ ರಾತ್ರಿ ಶಾಲೆಗಳನ್ನು ಇತ್ತೀಚೆಗೆ ಆರಂಭಿಸುವ ಮೂಲಕ ಕಲಿಕೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳನ್ನು ಉತ್ತಮ ಅಂಕಗಳಿಗಾಗಿ ಪ್ರೋತ್ಸಾಹಿಸುವ ಕೆಲಸ ನಡೆದಿದೆ.

ಸಂಜೆ 6ರಿಂದ ರಾತ್ರಿ 8.30ರ ವರೆಗೆ ತರಗತಿ ನಡೆಸಲಾಗುತ್ತಿದೆ. ಗಣಿತ, ಇಂಗ್ಲಿಷ್, ಸಮಾಜ ವಿಜ್ಞಾನ, ವಿಜ್ಞಾನ ಹಾಗೂ ಹಿಂದಿ ವಿಷಯಗಳ ಕುರಿತ ಪರಿಣಾಮಕಾರಿ ಬೋಧನೆಗಾಗಿ ಶಿಕ್ಷಕರಿಗೆ ತರಬೇತಿ ಕೊಡಿಸಲಾಗಿದೆ. ಸದ್ಯದಲ್ಲೇ ವಿದ್ಯಾರ್ಥಿಗಳಿಗೆ ಅನುಕೂಲಕ್ಕಾಗಿ ವಿಷಯ ಕುರಿತು ಸಂವಾದ,ರಸಪ್ರಶ್ನೆ ಕಾರ‌್ಯಕ್ರಮ ಏರ್ಪಡಿಸಲಾಗುತ್ತಿದೆ.

ಈ ಬಾರಿ ಜಿಲ್ಲೆಯ 440 ಪ್ರೌಢಶಾಲೆಗಳ ಅಂದಾಜು 25 ಸಾವಿರ ವಿದ್ಯಾರ್ಥಿಗಳು 80 ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿದ್ದಾರೆ. ಕಳೆದ ವರ್ಷ 23 ಸಾವಿರ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಶೇ.87 ಫಲಿತಾಂಶ ಬಂದಿತ್ತು.

ಕಿರುಹೊತ್ತಿಗೆಗಳು: ಪ್ರಶ್ನೆ ಪತ್ರಿಕೆಗಳ ಗುಚ್ಛ, ವ್ಯಾಕರಣ ಇತ್ಯಾದಿ ಕಲಿಕೆಗೆ ಪೂರಕವಾಗಿ ಹಿಂದಿ, ವಿಜ್ಞಾನ, ಗಣಿತ, ಇಂಗ್ಲಿಷ್ ಹಾಗೂ ಕನ್ನಡ ವಿಷಯಗಳ ಕುರಿತಂತೆ ಪ್ರತ್ಯೇಕ ಕಿರು ಹೊತ್ತಿಗೆಗಳನ್ನು ಸಿದ್ಧಪಡಿಸಲಾಗಿದೆ. ಹಿಂದಿ-ನೂತನ, ರಚನ, ಸಂಕಲ್ಪ, ಸುಗಮ ವ್ಯಾಕರಣ. ವಿಜ್ಞಾನ-ಅಣು, ಪರಮಾಣು, ಸಂಯುಕ್ತ, ಧಾತು. ಗಣಿತ-ಸಮರ್ಥ, ವಿಜೇತ, ನಿರಂತರ, ಆವರ್ತ, ಕಾರ್ಡ್, ಕನ್ನಡ-ಕಸುವು ಹಾಗೂ ಇಂಗ್ಲಿಷ್‌ನ ವಾರಿ ಕಿರು ಹೊತ್ತಿಗೆ ಪ್ರಕಟಣೆಗೆ ಅನುದಾನ ಬಿಡುಗಡೆ ಮಾಡುವಂತೆ ಕೋರಿ ಜಿಲ್ಲಾಧಿಕಾರಿಗೆ ಶಿಕ್ಷಣ ಇಲಾಖೆ ಈಗಾಗಲೇ ಮನವಿ ಮಾಡಿದೆ.

ಪ್ರಶ್ನೆ ಪತ್ರಿಕೆ ವಿನ್ಯಾಸ ಬದಲು: ಈ ಬಾರಿಯ ಎಲ್ಲ ವಿಷಯಗಳ ಪ್ರಶ್ನೆ ಪತ್ರಿಕೆ ವಿನ್ಯಾಸ ಬದಲಾಗಿದೆ. ಅಧ್ಯಾಯ ಆಧರಿತ ಬದಲು ಈ ಬಾರಿ ಇಡೀ ಪಠ್ಯಾಧರಿತ ಪ್ರಶ್ನೆ ಪತ್ರಿಕೆ ಮೂಲಕ ವಿದ್ಯಾರ್ಥಿಯ ಬರಹದ ಕೌಶಲ್ಯ ಪರಿಶೀಲನೆಗೆ ಹೆಚ್ಚಿನ ಒತ್ತು ಕೊಡಲಾಗಿದೆ. ಆದ್ದರಿಂದ ಬದಲಾದ ಪ್ರಶ್ನೆ ಪತ್ರಿಕೆ ಕುರಿತಂತೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಕೊಡಿಸಲಾಗಿದೆ. ಪ್ರಶ್ನೆ ಪತ್ರಿಕೆ ಬದಲಾಗಿದೆ ಎಂಬ ಯಾವುದೇ ಆತಂಕ ವಿದ್ಯಾರ್ಥಿಗಳಿಗೆ ಅಗತ್ಯವಿಲ್ಲ ಎನ್ನುತ್ತಾರೆ ಡಿಡಿಪಿಐ ಕೆ.ರವಿಶಂಕರರೆಡ್ಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net