

ಚಿತ್ರದುರ್ಗ: ವಿದ್ಯಾಭ್ಯಾಸದೊಂದಿಗೆ ಆಟೋಟ, ಸಾಂಸ್ಕೃತಿಕ ಚಟುವಟಿಕೆಗಳೆಡೆ ಆಸಕ್ತಿ ಬೆಳೆಸಿಕೊಳ್ಳ ಬೇಕೆಂದು ಎಸ್ಪಿ ಡಾ.ಕೆ.ಅರುಣ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ನಗರದ ದೇವರಾಜ ಅರಸು ಎಜುಕೇಷನ್ ಸೊಸೈಟಿ 35ನೇ ವಾರ್ಷಿಕೋತ್ಸವ ‘ಡೆಸ್ಟಿನಿ-2020’ ಅಂತಿಮ ದಿನ ಭಾನುವಾರ ಸಾಂಸ್ಕೃತಿಕ ಹಾಗೂ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಪಡೆಯುವುದರ ಜತೆ ಕ್ರೀಡೆ, ಹತ್ತಾರು ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಪ್ರತಿಭೆಯನ್ನು ಪ್ರದರ್ಶಿಸುವ ಮೂಲಕ ತಮ್ಮ ಭವಿಷ್ಯ ಕಂಡುಕೊಳ್ಳಬೇಕು. ಓದಿನೊಂದಿಗೆ ಉತ್ತಮ ಹವ್ಯಾಸಗಳು ಬದುಕಿನ ದಾರಿ ಸುಗಮಗೊಳಿಸುತ್ತವೆ ಎಂದರು.
ಡಿಎಚ್‌ಒ ಡಾ.ಸಿ.ಎಲ್.ಪಾಲಾಕ್ಷ ಮಾತನಾಡಿ, ಇವತ್ತು ವಿದ್ಯಾರ್ಥಿಗಳೆದುರು ನೂರಾರು ಅವಕಾಶಗಳಿರುವುದು ನಿಜ. ಇದರಿಂದ ವಿದ್ಯಾರ್ಥಿ, ಪಾಲಕ, ಪೋಷಕರು ಗೊಂದಲಕ್ಕೆ ಬೀಳುವುದು ಸಹಜ. ಇಂಥ ಸನ್ನಿವೇಶದಲ್ಲಿ ವಿದ್ಯಾರ್ಥಿಗಳು ನಿಗದಿತ ದಾರಿಯಲ್ಲಿ ಗುರಿ ಸಾಧಿಸಬೇಕು ಎಂದು ತಿಳಿಸಿದರು.
ಸಂಸ್ಥೆ ಸಿಇಒ ರಘುಚಂದನ್ ಮಾತನಾಡಿ, ತಮ್ಮ ತಂದೆ ಚಂದ್ರಪ್ಪ ಅವರ ಶ್ರಮದಿಂದ ಬೆಳೆದಿರುವ ಈ ಸಂಸ್ಥೆ ಇಂದು ಸಮಾಜಕ್ಕೆ ಉತ್ತಮ ಶಿಕ್ಷಣ ಸೇವೆ ನೀಡುತ್ತಿದೆ. ಇಲ್ಲಿ ಓದಿದ ಅನೇಕರು ಉನ್ನತ ಹುದ್ದೆಗಳಲ್ಲಿದ್ದಾರೆ. ನಮ್ಮ ತಂದೆಯೊಂದಿಗೆ ಸಂಸ್ಥೆ ಕಟ್ಟಲು ನೆರವಾದವರನ್ನು ಸನ್ಮಾನಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.
ರಘುದೀಕ್ಷಿತ್ ಮತ್ತವರ ತಂಡದ ಕಲಾವಿದರು ಜನಪದ, ಸುಗಮ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಪ್ರಾಚಾರ್ಯ ಕೋಟ್ರೆಶ್, ಸಂಸ್ಥೆ ಆಡಳಿತಾಧಿಕಾರಿ ಎಚ್.ಚಂದ್ರಕಲಾ, ನಂದನ್ ಇತರರಿದ್ದರು.