

ಚಿತ್ರದುರ್ಗ: ದುಡಿಮೆ ಮೂಲಕ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದು ಎಸ್ಪಿ ಜಿ.ರಾಧಿಕಾ ಹೇಳಿದರು.
ಪ್ರಧಾನಮಂತ್ರಿ ಕೌಶಲ ಕೇಂದ್ರ, ಜಿಲ್ಲಾ ಉದ್ಯೋಗ ವಿನಿಮಯ ಇಲಾಖೆಯಿಂದ ನಗರದ ಮಾದಾರ ಚನ್ನಯ್ಯ ಗುರುಪೀಠದಲ್ಲಿ ಬುಧವಾರ ಆಯೋಜಿಸಿದ್ದ ಕೌಶಲ ಹಾಗೂ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದರು.
ಪುರುಷರಂತೆ ಮಹಿಳೆಯರು ಇಂದು ಎಲ್ಲ ಕ್ಷೇತ್ರಗಳಲ್ಲಿ ಯಶಸ್ವಿಯಾಗಿದ್ದಾರೆ. ಗೊಡ್ಡು ಸಂಪ್ರದಾಯಗಳನ್ನು ಬದಿಗೊತ್ತಿ ಯಾವ ಪುರುಷನಿಗೂ ಕಮ್ಮಿಯಿಲ್ಲದಂತೆ ಮಹಿಳೆ ಸಾಧನೆ ಮಾಡಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ, ನಿರುದ್ಯೋಗಿ ಯುವಜನರು ಸರ್ಕಾರಿ ನೌಕರಿಗಾಗಿ ಅಲೆದಾಡುವುದನ್ನು ತಪ್ಪಿಸಬೇಕಿದೆ. ಅವರ ಸ್ವಾವಲಂಬಿ ಜೀವನ ನಿರ್ವಹಣೆಗೆ ಪ್ರಧಾನ ಮಂತ್ರಿ ಕೌಶಲ ತರಬೇತಿ ಕೇಂದ್ರ ನೆರವಾಗಲಿದೆ. ಶ್ರೀಮಠದಲ್ಲಿ ಸ್ವಯಂ ಉದ್ಯೋಗಕ್ಕೆ ಪೂರಕವಾಗಿ ಉಚಿತ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ಲೀಡ್‌ಬ್ಯಾಂಕ್ ಹಿರಿಯ ವ್ಯವಸ್ಥಾಪಕ ಶ್ರೀನಿವಾಸ್, ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಕಿಶೋರ್ ಮಾತನಾಡಿದರು.
ಉದ್ಯೋಗ ಮೇಳದಲ್ಲಿ 20ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಿದ್ದವು. ಪ್ರಧಾನ ಮಂತ್ರಿ ಕೌಶಲ ತರಬೇತಿ ಕೇಂದ್ರದಲ್ಲಿ ಉಚಿತ ತರಬೇತಿ ಪಡೆಯುವಂಥ ಆಸಕ್ತರು ಅಗತ್ಯ ದಾಖಲೆಗಳೊಂದಿಗೆ ಹೆಸರು ನೋಂದಾಯಿಸಬೇಕು ಎಂದು ಕೇಂದ್ರದ ಶಿವಪ್ರಸಾದ್ ತಿಳಿಸಿದರು.