

ಚಿತ್ರದುರ್ಗ: ಕರೊನಾ ಲಾಕ್‌ಡೌನ್ ಸಂಕಟದ ಈ ಸಮಯದಲ್ಲಿ ಆರ್ಥಿಕವಾಗಿ ನೊಂದಿರುವ ಪ್ರತಿ ಕುಟುಂಬಕ್ಕೆ 10 ಸಾವಿರ ರೂ. ಕೊಡುವಂತೆ ಕೇಂದ್ರವನ್ನು ಒತ್ತಾಯಿಸಿ ಮೇ 28ರಂದು ಕಾಂಗ್ರೆಸ್ ಸಾಮಾಜಿಕ ಜಾಲ ತಾಣಗಳ ಮೂಲಕ ಅಭಿಯಾನ ನಡೆಸಲಿದೆ ಎಂದು ಕೆಪಿಸಿಸಿ ಕಾರ‌್ಯಾಧ್ಯಕ್ಷ ಈಶ್ವರ್‌ಖಂಡ್ರೆ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಜವಾಹರಲಾಲ್ ನೆಹರು 55ನೇ ಪುಣ್ಯಸ್ಮರಣೆ ಕಾರ್ಯಕ್ರಮದ ಬಳಿಕ ಸುದ್ದಿಗಾರರ ಜತೆ ಮಾತನಾಡಿ, ಕೇಂದ್ರ ಸರ್ಕಾರ ಘೋಷಿಸಿರುವ 20 ಲಕ್ಷ ಕೋಟಿ ರೂ. ಪ್ಯಾಕೇಜ್ ಅಂಗೈಯಲ್ಲಿ ಅರಮನೆ ತೋರಿಸಿದಂತಾಗಿದೆ ಎಂದು ಟೀಕಿಸಿದರು.
ಆದಾಯ ತೆರಿಗೆ ಪಾತಿಸುವಂಥವರನ್ನು ಹೊರತು ಪಡಿಸಿ ಉಳಿದ ಎಲ್ಲ ಕುಟುಂಬಗಳಿಗೆ 10 ಸಾವಿರ ರೂ. ಪರಿಹಾರ ಕೊಡಬೇಕೆಂದು ಪಕ್ಷದ ಮುಖಂಡರು, ಕಾರ್ಯಕರ್ತರು ಕೇಂದ್ರವನ್ನು ಒತ್ತಾಯಿಸಲಿದ್ದಾರೆ. ಯಾವುದೇ ಪೂರ್ವ ಸಿದ್ಧತೆ ಇಲ್ಲದೆ ಲಾಕ್‌ಡೌನ್ ಘೋಷಿಸಿದ್ದರಿಂದಾಗಿ ಇಡೀ ದೇಶ ಹಾಗೂ ಕೋಟ್ಯಂತರ ಅಸಂಘಟಿತ ಕಾರ್ಮಿಕರು ತೊಂದರೆ ಅನುಭವಿಸುವಂತಾಯಿತು.
ಇನ್ನು ಹಲವು ವರ್ಗಗಳಿಗೆ ಪ್ಯಾಕೇಜ್ ವಿಸ್ತರಿಸುವ ಮೂಲಕ ರಾಜ್ಯದ 1.32 ಕೋಟಿ ಅಸಂಘಟಿತ ಕಾರ್ಮಿಕರಿಗೆ ನೆರವಾಗಬೇಕೆಂದು ರಾಜ್ಯ ಸರ್ಕಾರವನ್ನೂ ಒತ್ತಾಯಿಸಿದರು.
ಮಾಜಿ ಸಚಿವ ಎಚ್.ಆಂಜನೇಯ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಶಾಸಕ ಟಿ.ರಘುಮೂರ್ತಿ, ವಿಧಾನ ಪರಿಷತ್ ಸದಸ್ಯೆ ಜಯ ಮ್ಮ ಬಾಲರಾಜ್, ಜಿಪಂ ಅಧ್ಯಕ್ಷೆ ಶಶಿಕಲಾ ಸುರೇಶ್‌ಬಾಬು, ಮಾಜಿ ಶಾಸಕರಾದ ಉಮಾಪತಿ, ಬಿ.ಜಿ.ಗೋವಿಂದಪ್ಪ, ತಿಪ್ಪೇಸ್ವಾಮಿ, ಡಿಸಿಸಿ ಅಧ್ಯಕ್ಷ ಎಂ.ಕೆ.ತಾಜ್‌ಫೀರ್, ಹನುಮಲಿ ಷಣ್ಮುಖಪ್ಪ, ಜಿ.ಎಚ್.ಮಂಜುನಾಥ್ ಸೇರಿ ಪಕ್ಷದ ನಾನಾ ಮುಖಂಡರು ಇದ್ದರು.
ಜೂನ್ 7ರಂದು ಪದಗ್ರಹಣ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಹಿತ ಪಕ್ಷದೆಲ್ಲ ಹೊಸ ಪದಾಧಿಕಾರಿಗಳು ಜೂನ್ 7ರಂದು ಸರಳವಾಗಿ ಪದಗ್ರಹಣ ಮಾಡಲಿದ್ದಾರೆ. ಅಂದು ರಾಜ್ಯದ 6021 ಗ್ರಾಪಂ, ತಾಪಂ ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ ಎಂದು ಖಂಡ್ರೆ ತಿಳಿಸಿದರು.
ರಾಹುಲ್ ಸಲಹೆ ಕಡೆಗಣಿಸಿದ್ದು ತಪ್ಪು: ಜನವರಿ ಅಂತ್ಯಕ್ಕೆ ಕರೊನಾ ದೇಶಕ್ಕೆ ಕಾಲಿಟ್ಟರೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಮಧ್ಯಪ್ರದೇಶದ ರಾಜಕೀಯ ಮೇಲಾಟಕ್ಕಾಗಿ ಲಾಕ್‌ಡೌನ್ ಘೋಷಣೆ ವಿಳಂಬಕ್ಕೆ ಕಾರಣವಾಯಿತು ಎಂದು ಕೇಂದ್ರವನ್ನು ಟೀಕಿಸಿದ ಈಶ್ವರ್ ಖಂಡ್ರೆ, ಫೆಬ್ರವರಿ 12ರಂದೇ ರಾಹುಲ್‌ಗಾಂಧಿ ಕೊರನಾ ನಿಯಂತ್ರಣ ಕುರಿತು ಕೊಟ್ಟಿದ್ದ ಸಲಹೆಗಳನ್ನು ಕೇಂದ್ರ ಸರ್ಕಾರ ಕಡೆಗಣಿಸಿತು ಎಂದು ದೂರಿದರು.