

ಚಿತ್ರದುರ್ಗ: ಸ್ಥಾಪನೆಯಾದ 10 ತಿಂಗಳಲ್ಲಿ ಐದು ಸಾವಿರಕ್ಕೂ ಹೆಚ್ಚು ಜನರಿಗೆ ಪಾಸ್ ಪೋರ್ಟ್ ಕೊಡಿಸಿದ್ದ ಚಿತ್ರದುರ್ಗ ಅಂಚೆ ಪಾಸ್‌ಪೋರ್ಟ್ ಸೇವಾ ಕೇಂದ್ರದಲ್ಲಿ ಸದ್ಯಕ್ಕೆ ದಾಖಲೆಗಳ ಪರಿಶೀಲನೆ ನಡೆಯುತ್ತಿಲ್ಲ.
ಲಾಕ್‌ಡೌನ್ ನಡುವೆ ಮೇ 11ರಿಂದ ಜಿಲ್ಲಾಧಿಕಾರಿ ಅನುಮತಿಯೊಂದಿಗೆ ಸೇವಾ ಕೇಂದ್ರ ಪುನರಾರಂಭವಾಗಿದದ್ದರೂ ಆನ್‌ಲೈನ್ ಓಪನ್ ಆಗದ ಕಾರಣ ಹೊಸ ಅರ್ಜಿ ಸಲ್ಲಿಕೆ ಹಾಗೂ ಮಾರ್ಚ್ ನಿಂದ ಪೆಂಡಿಂಗ್ ಇರಬಹುದಾದ ದಾಖಲೆಗಳ ಪರಿಶೀಲನೆ ನಡೆಯುತ್ತಿಲ್ಲ.
2019ರ ಫೆಬ್ರವರಿ 14ರಂದು ಕೇಂದ್ರ ಆರಂಭವಾಗಿತ್ತು. ಆರಂಭದಲ್ಲಿ ನಿತ್ಯ 20 ಕ್ಕೂ ಹೆಚ್ಚು ದಾಖಲೆಗಳ ಪರಿಶೀಲನೆ ನಡೆಯುತ್ತಿತ್ತು. ಅದೀಗ ಕ್ರಮೇಣ 40-50ಕ್ಕೆ ಹೆಚ್ಚಿದೆ. ತ್ವರಿತವಾಗಿ ಪರಿಶೀಲನೆ ನಡೆಯುತ್ತದೆ ಎಂಬ ಕಾರಣ ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆಯ ಅರ್ಜಿದಾರರು ಚಿತ್ರದುರ್ಗ ದತ್ತ ಮುಖ ಮಾಡಿದ್ದರು.
ಕೇಂದ್ರ ಸ್ಥಾಪನೆ ಆದಂದಿನಿಂದ ಅರ್ಜಿದಾರರಿಗೆ ಸಾಮಾನ್ಯವಾಗಿ 21 ದಿನಗಳ ಒಳಗೆ ಪಾಸ್‌ಪೋರ್ಟ್ ಕೈ ಸೇರುತ್ತಿದೆ. ವಿದ್ಯಾಭ್ಯಾಸ, ಉದ್ಯೋಗ ಮೊದಲಾದ ಕಾರಣಗಳಿಗೆ ಇಮಿಗ್ರೇಶನ್ ಚೆಕ್‌ನಾಟ್ ರಿಕ್ವೈರ್ಡ್(ಇಸಿಎನ್‌ಆರ್)ಅಥವಾ ಪ್ರವಾಸಕ್ಕೆ ಅಗತ್ಯ ವಿರುವ ಇಮಿಗ್ರೇಶನ್ ಚೆಕ್‌ರಿಕ್ವೈರ್ಡ್(ಇಸಿಆರ್)ಪಾರ್ಸ್‌ಪೋರ್ಟ್ ಪಡೆಯಲು ಸಾಧ್ಯವಾಗಿದೆ.
ಥರ್ಮಾಮೀಟರ್ ಯಾರು ಖರೀದಿಸಬೇಕು?: ಅಧಿಕೃತವಾಗಿ ಕೇಂದ್ರವೀಗ ಪುನರಾರಂಭ ಮಾಡಿದ್ದರೂ ಥರ್ಮಾಮೀಟರ್ ಸಹಿತ ಅಗತ್ಯ ಸವಲತ್ತಿಲ್ಲದೆ ಹೇಗೆ ಕೆಲಸ ಮಾಡುವುದು ಎಂಬ ಭೀತಿ ಸಿಬ್ಬಂದಿಯನ್ನು ಕಾಡಿದೆ. ಸ್ಕಾೃನಿಂಗ್‌ಗೆ ಅಗತ್ಯವಿರುವ ಥರ್ಮಾಮೀಟರ್ ಖರೀದಿ ಕುರಿತು ಮೇಲಧಿಕಾರಿಗಳಿಗೆ ಸ್ಥಳೀಯ ಅಂಚೆ ಅಧಿಕಾರಿಗಳು ಪತ್ರ ಬರೆದಿದ್ದಾರಂತೆ. ಇನ್ನು ಬಯೋಮೆಟ್ರಿಕ್ ಬಳಕೆ ಕುರಿತೂ ಸ್ಪಷ್ಟತೆ ಇಲ್ಲವಾಗಿದೆ.
ದಾವಣಗೆರೆಯಲ್ಲಿ ಕಾರ‌್ಯಾರಂಭ ಮಾಡಿಲ್ಲ: ದಾವಣಗೆರೆಯಲ್ಲಿ ಪಿಒಪಿಎಸ್‌ಕೆ ಇನ್ನೂ ಪುನರಾರಂಭವಾಗಿಲ್ಲ. ಈ ಹಿನ್ನೆಲೆಯಲ್ಲಿ ಚಿತ್ರದುರ್ಗದಲ್ಲಿ ಪರಿಶೀಲನೆ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಸಾಮಾಜಿಕ ಅಂತರ ಕಾಪಾಡಿಕೊಂಡು 20-30 ಅರ್ಜಿದಾರರ ದಾಖಲೆಗಳ ವೆರಿಫಿಕೇಷನ್ ಸಾಧ್ಯವಿದೆ ಎನ್ನುತ್ತಾರೆ ಅಂಚೆ ಸಿಬ್ಬಂದಿ.
ಪಾಸ್‌ಫೋರ್ಟ್ ಅಗತ್ಯ: ಹೊರ ಜಿಲ್ಲೆಗೇ ಹೋಗಲಾಗುತ್ತಿಲ್ಲ ಎಂಬ ಈ ಸನ್ನಿವೇಶದಲ್ಲಿ ಫಾರಿನ್‌ಗೆ ಹೋಗೋರು ಯಾರಿದ್ದಾರೆ ಎಂಬ ಪ್ರಶ್ನೆ ಎದುರಾಗಿದ್ದರೂ ಇದೆಲ್ಲ ತಾತ್ಕಾಲಿಕ. ಪಾಸ್ ಫೋರ್ಟ್‌ನಂಥ ದಾಖಲೆಗಳು ಜನರಿಗೆ ಅಗತ್ಯವಿದೆ ಎಂಬ ಅಭಿಪ್ರಾಯವಿದೆ.
ಸ್ಯಾನಿಟೈಸರ್, ಮಾಸ್ಕ್, ಗ್ಲೌಸ್ ಒದಗಿಸಲಾಗಿದೆ. ಥರ್ಮಾಮೀಟರ್ ಖರೀದಿ ನಮ್ಮ ವ್ಯಾಪ್ತಿಗೆ ಬರದು. ಸದ್ಯಕ್ಕೆ ಚಿತ್ರದುರ್ಗ ಪಿಒಎಸ್‌ಕೆಯಲ್ಲಿ ದಾಖಲೆಗಳ ಪರಿಶೀಲನೆ ನಡೆಯುತ್ತಿಲ್ಲ. ದಾವಣಗೆರೆಯಲ್ಲಿ ಕೇಂದ್ರ ಪುನರಾರಂಭವಾಗಿಲ್ಲ. ಲಾಕ್‌ಡೌನ್ ಮುಗಿದ ನಂತರ ಪಿಎಸ್‌ಪಿಒಕೆಗಳಲ್ಲಿ ಎಂದಿನಂತೆ ಚಟುವಟಿಕೆಗಳು ನಡೆಯಲಿವೆ.
ವಿರೂಪಾಕ್ಷಪ್ಪ,ಅಂಚೆ ಅಧೀಕ್ಷಕರು,ಚಿತ್ರದುರ್ಗ.