ಸರ್ಕಾರಿ ಉದ್ಯೋಗಕ್ಕೆ ಕಾಯದಿರಿ

CTD 13 YUVA
Published on

ಚಿತ್ರದುರ್ಗ: ವಿದ್ಯಾವಂತ ಯುವಜನರು ಸರ್ಕಾರಿ ನೌಕರಿಗೆ ಪರದಾಡದೆ ಸರ್ಕಾರದ ಸೌಲಭ್ಯ ಬಳಸಿಕೊಂಡು ಸ್ವಯಂ ಉದ್ಯೋಗಿಗಳಾಗಬೇಕು ಎಂದು ಬೆಂಗಳೂರು ಕೆನರಾ ಬ್ಯಾಂಕ್ ಮಹಾಪ್ರಬಂಧಕ ಎಸ್.ಡಿ.ಬಿರಾದರ್ ಹೇಳಿದರು.

ಹಣಕಾಸು ಸಾಕ್ಷರತಾ ಸಪ್ತಾಹ ಅಂಗವಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಹಾಗೂ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ವತಿಯಿಂದ ನಗರದ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ಗುರುವಾರ ಏರ್ಪಡಿಸಿದ್ದ ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ ಉದ್ದಿಮೆಗಳ ಮಾಹಿತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಸ್ವಯಂ ಉದ್ಯೋಗದೊಂದಿಗೆ ಸ್ವಾವಲಂಬನೆ ಸಾಧಿಸಿ. ಇದರಿಂದ ಹಲವರಿಗೆ ಉದ್ಯೋಗ ಒದಗಿಸಲು ಸಾಧ್ಯವಾಗಲಿದೆ. ಸ್ವಯಂ ಉದ್ಯೋಗಕ್ಕೆ ಹಣಕಾಸು ಸಾಕ್ಷರತೆಯೂ ಮುಖ್ಯ. ವಿದ್ಯಾರ್ಥಿ ಜೀವನದಲ್ಲೇ ಕಲಿಕೆ ಜತೆ ಸ್ವಯಂ ಉದ್ಯೋಗ ಕುರಿತು ಜಾಗೃತಿ ಮೂಡಿಸಬೇಕು ಎಂದರು.

ರಿಸರ್ವ್ ಬ್ಯಾಂಕ್ ಈ ವರ್ಷ ಅತಿಸಣ್ಣ, ಸಣ್ಣ ಹಾಗೂ ಮದ್ಯಮ ಉದ್ದಿಮೆಗಳ ಹಣಕಾಸು ಸಾಕ್ಷರತೆ ಮಾಹಿತಿ ನೀಡುತ್ತಿದೆ. ದೇಶದ ಅತಿಸಣ್ಣ, ಸಣ್ಣ, ಮದ್ಯಮ ಉದ್ದಿಮೆ 6 ಕೋಟಿ ಘಟಕಗಳಿಂದ 12 ಕೋಟಿ ಜನರಿಗೆ, ಶೇ.50 ಜನರಿಗೆ ಸಣ್ಣ ಉದ್ಯಮಗಳಿಂದ ಉದ್ಯೋಗ ಸಿಕ್ಕಿದೆ. ಸ್ವಯಂ ಉದ್ಯೋಗಕ್ಕೆ ವ್ಯವಹಾರಿಕ ಜ್ಞಾನ, ಮನಸ್ಸು ಹಾಗೂ ಗುರಿ ಇರಬೇಕು. ಬ್ಯಾಂಕ್ ಸಾಲದ ಸದುಪಯೋಗ ಆಗಬೇಕೆಂದು ಹೇಳಿದರು.

ಸರ್ಕಾರಿ ಪಾಲಿಟೆಕ್ನಿಕ್ ಪ್ರಾಂಶುಪಾಲ ಹೇಮಂತ್ ಕುಮಾರ್ ಮಾತನಾಡಿ, ಭಾರತೀಯ ರಿಸರ್ವ್ ಬ್ಯಾಂಕ್, ಕಾಲೇಜಿಗೆ 10 ಕಂಪ್ಯೂಟರ್ ಹಾಗೂ 1 ಪ್ರಿಂಟರ್ ಕೊಡುಗೆ ನೀಡಿದೆ ಎಂದು ತಿಳಿಸಿದರು.

ನಬಾರ್ಡ್ ಜಿಲ್ಲಾಭಿವೃದ್ಧಿ ಪ್ರಬಂಧಕಿ ಕವಿತಾ ಮಾತನಾಡಿ, ಹೊಸ ರೀತಿಯ ಅಲೋಚನೆ ಉದ್ಯಮದ ಯಶಸ್ವಿಗೆ ಸಹಕಾರಿ ಆಗಲಿದೆ. ಆಹಾರ ಕ್ಷೇತ್ರದಲ್ಲಿ ವಿಫುಲ ಅವಕಾಶಗಳಿವೆ ಎಂದರು.

ಜಿಲ್ಲಾ ಕೈಗಾರಿಕೆ ಕೇಂದ್ರದ ಉಪ ನಿರ್ದೇಶಕ ಸುದರ್ಶನ್ ಕುಮಾರ್ ಮಾತನಾಡಿ, ಬಂಡವಾಳ ಆಧರಿಸಿ ಉದ್ದಿಮೆಗಳನ್ನು ವರ್ಗೀಕರಿಸಲಾಗಿದೆ. ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರಗಳ ಮೂಲಕ ದೇಶಾದ್ಯಂತ ಪ್ರಧಾನ ಮಂತ್ರಿ ಉದ್ಯೋಗ ಸೃಜನೆ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.

ದಾವಣಗೆರೆ ಕೆನರಾ ಬ್ಯಾಂಕ್ ಸಹಾಯಕ ಮಹಾಪ್ರಬಂಧಕ ರಘುರಾಜ್, ಆರ್‌ಬಿಐ ಅಧಿಕಾರಿ ಆನಂದ್ ನಿಮ್, ಜಿಲ್ಲಾ ಕೈಗಾರಿಕೆ ಕೇಂದ್ರದ ಸಹಾಯಕ ನಿರ್ದೇಶಕ ಹನುಮಂತರಾಯಪ್ಪ ಮಾತನಾಡಿದರು.

ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ವಿಭಾಗೀಯ ವ್ಯವಸ್ಥಾಪಕ ನಿಂಗೇಗೌಡ, ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್‌ನ ಪ್ರಾದೇಶಿಕ ವ್ಯವಸ್ಥಾಪಕ ಮಹದೇವಯ್ಯ, ಆರ್ಥಿಕ ಸಾಕ್ಷರತಾ ಕೇಂದ್ರದ ಆರ್ಥಿಕ ಸಾಕ್ಷರತಾ ಸಂಯೋಜಕ ಜಿ.ಸಿ.ತಿಮ್ಮಣ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net