ದುರ್ಗಕ್ಕೆ ಐಸಿಎಂಆರ್ ತಜ್ಞರ ತಂಡ ಭೇಟಿ

DC VINOD PRIYA (1)
Published on

ಚಿತ್ರದುರ್ಗ: ಕರೊನಾ ಸೋಂಕು ಸಮುದಾಯದ ವಿಸ್ತರಣೆ ಹಂತವನ್ನು ತಲುಪಿದೆಯೋ, ಇಲ್ಲವೋ ಎಂಬುದನ್ನು ಅರಿಯಲು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ (ಐಸಿಎಂಆರ್) ತಜ್ಞರ ತಂಡ ಚಿತ್ರದುರ್ಗಕ್ಕೆ ಆಗಮಿಸಲಿದೆ.

ಇದಕ್ಕೆ ಪೂರಕವಾಗಿ ಜಿಲ್ಲಾಡಳಿತ ಅಗತ್ಯ ಸಿದ್ಧತೆ ನಡೆಸಿದ್ದು, ಸದ್ಯದ ಮಾಹಿತಿಯಂತೆ ಈ ತಂಡ ಏ.27ರಿಂದ ಜಿಲ್ಲೆಯಲ್ಲಿ ಪ್ರವಾಸ ಆರಂಭಿಸುವ ಸಾಧ್ಯತೆ ಇದೆ.

ಸೋಂಕು ಹರಡುವಿಕೆ ನಿಯಂತ್ರಿಸಲು ಜನಸಂಖ್ಯೆ ಆಧರಿಸಿ ಮಾರ್ಗಸೂಚಿ ಸಿದ್ಧಪಡಿಸಲು ಮುಂದಾಗಿರುವ ರಾಷ್ಟ್ರೀಯ ಕೋವಿಡ್-19ರ ಕಾರ್ಯಪಡೆ ಹಾಗೂ ಸಾಂಕ್ರಾಮಿಕ ರೋಗ ತಜ್ಞರ ಸಮಿತಿ, ದೇಶದ 25 ರಾಜ್ಯಗಳ 82 ಜಿಲ್ಲೆಗಳನ್ನು ಸಮೀಕ್ಷೆಗೆ ಆಯ್ಕೆ ಮಾಡಿಕೊಂಡಿವೆ. ರಾಜ್ಯದ ಬೆಂಗಳೂರು, ಕಲಬುರಗಿ ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲೂ ಈ ಸಮೀಕ್ಷೆ ನಡೆಯಲಿದೆ.

ಬೆಂಗಳೂರು, ಕಲಬುರಗಿಯಲ್ಲಿ ಕರೊನಾ ಮಹಾಮಾರಿಯ ಅಟ್ಟಹಾಸವಿದ್ದರೆ, ಲಾಕ್‌ಡೌನ್ ಘೋಷಣೆಯಾದ ಮೊದಲ ದಿನದಂದೇ ಪತ್ತೆಯಾದ ಒಂದು ಪ್ರಕರಣ ಹೊರತು ಪಡಿಸಿ ಚಿತ್ರದುರ್ಗದಲ್ಲಿ ಒಂದು ತಿಂಗಳಿಂದ ಈಚೆಗೆ ಹೊಸ ಪ್ರಕರಣ ಈವರೆಗೆ ಕಂಡು ಬಂದಿಲ್ಲ.

ಈ ಹಿನ್ನೆಲೆಯಲ್ಲಿ ಪರಿಷತ್‌ನಿಂದ ಆಗಮಿಸಲಿರುವ 20 ತಜ್ಞರು, ತಲಾ ಇಬ್ಬರಂತೆ ಹತ್ತು ತಂಡಗಳಲ್ಲಿ ಜಿಲ್ಲಾದ್ಯಂತ ಸಮೀಕ್ಷೆ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ ಅಧಿಕಾರಿಗಳ ಪೂರ್ವ ಸಿದ್ಧತೆ ಸಭೆಯನ್ನೂ ಈಗಾಗಲೇ ನಡೆಸಿದ್ದಾರೆ.

ಎಲ್ಲೆಲ್ಲಿ ನಡೆಯಲಿದೆ ಸಮೀಕ್ಷೆ: ಎಲ್ಲೆಲ್ಲಿ ಪರೀಕ್ಷೆ ನಡೆಸಬೇಕೆಂಬುದನ್ನು ಪರಿಷತ್ ಆಯ್ಕೆ ಮಾಡಿ ಜಿಲ್ಲಾಡಳಿತಕ್ಕೆ ಪಟ್ಟಿಯನ್ನು ಕಳಿಸಿಕೊಟ್ಟಿದೆ. ಚಿತ್ರದುರ್ಗ ತಾಲೂಕಿನ ವಡ್ಡನಹಳ್ಳಿ, ಹೊಳಲ್ಕೆರೆ ಪಟ್ಟಣದ ವಾರ್ಡ್ ನಂ.5 ಹಾಗೂ ತಾಲೂಕಿನ ಹಿರೇಕಂದವಾಡಿ. ಮೊಳಕಾಲ್ಮೂರು ತಾಲೂಕು ಕಾಟನಾಯಕನಹಳ್ಳಿ. ಹೊಸದುರ್ಗ ತುಂಬಿನಕೆರೆ, ಹಾಗಲಕೆರೆ. ಹಿರಿಯೂರು ತಾಲೂಕು ಭರಮಗಿರಿ. ಚಳ್ಳಕೆರೆ ನಗರದ ವಾರ್ಡ್ ನಂ.22 ಹಾಗೂ ತಾಲೂಕಿನ ಘಟಪರ್ತಿ, ಪರುಶುರಾಮಪುರದಲ್ಲಿ ಸಮೀಕ್ಷೆ ನಡೆಯಲಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ತುಳಸಿ ರಂಗನಾಥ್ ತಿಳಿಸಿದ್ದಾರೆ.

ಮೂರು ತಿಂಗಳ ಕಾಲ ಟೆಸ್ಟ್ ಕಿಟ್: ಜನರಿಂದ ಪಡೆದ ಎರಡು ಹನಿ ರಕ್ತವನ್ನು ರ‌್ಯಾಂಡಮ್ ಟೆಸ್ಟ್ ಕಿಟ್‌ನಲ್ಲಿ 10-15 ನಿಮಿಷದೊಳಗೆ ಪರೀಕ್ಷಿಸಿ, ಸೋಂಕು ಇರುವ ಕುರಿತಂತೆ ಖಚಿತ ಪಡಿಸಿಕೊಳ್ಳಲಾಗುತ್ತದೆ. ಒಂದು ತಂಡದಿಂದ ನಿತ್ಯ 40ರಂತೆ ಒಂದು ಸುತ್ತಿಗೆ 400 ಜನರನ್ನು ಪರೀಕ್ಷಿಸಲಾಗುತ್ತದೆ. ತಿಂಗಳಿಗೆ ಒಂದು ಸುತ್ತಿನಂತೆ 3 ತಿಂಗಳ ಕಾಲ ಪರೀಕ್ಷೆ ನಡೆಯಲಿದೆ. ಪರೀಕ್ಷೆ ವೇಳೆ ಪಾಸಿಟಿವ್ ಸಂಖ್ಯೆ ಜಾಸ್ತಿ ಬಂದಲ್ಲಿ ಸೋಂಕು ಸಮುದಾಯಕ್ಕೆ ಹರಡುವ ಹಂತ ತಲುಪಿದೆ ಎಂದು ಪರಿಗಣಿಸಲಾಗುತ್ತದೆ. ಸದ್ಯ ರಾಜ್ಯದಲ್ಲಿ ವೈಯಕ್ತಿಕ, ಅಲ್ಲಲ್ಲಿ ಹಾಗೂ ಕ್ಲಸ್ಟರ್ ಮಟ್ಟದಲ್ಲಿ ಹರಡಿರುವ ಕರೊನಾ ಸೋಂಕು ಸಮುದಾಯ ಹರಡುವಿಕೆ ಹಂತವನ್ನು ತಲುಪಿಲ್ಲವೆನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net