

ಚಿತ್ರದುರ್ಗ: ಸಂವಿಧಾನ ಶಿಲ್ಪಿ, ಮಹಾ ಮಾನವತಾವಾದಿ ಡಾ.ಬಿ.ಆರ್.ಅಂಬೇಡ್ಕರ್ ಸೇರಿದಂತೆ ನಾನಾ ದಾರ್ಶನಿಕರ ತತ್ವಾದರ್ಶಗಳನ್ನು ತಪ್ಪದೇ ಅನುಸರಿಸಬೇಕಿದೆ ಎಂದು ಕರ್ನಾಟಕ ವಲಯದ ಅಸಿಸ್ಟೆಂಟ್ ಪೋಸ್ಟ್ ಮಾಸ್ಟರ್ ಜನರಲ್ ಸಂದೇಶ ಮಹದೇವಪ್ಪ ಹೇಳಿದರು.
ಅಖಿಲ ಭಾರತ ಎಸ್ಸಿ, ಎಸ್ಟಿ ಅಂಚೆ ನೌಕರರ ಕ್ಷೇಮಾಭಿವೃದ್ಧಿ ಸಂಘ, ಚಿತ್ರದುರ್ಗ-ದಾವಣಗೆರೆ ಶಾಖೆ ಚಿತ್ರದುರ್ಗದ ಮಹಾರಾಣಿ ಕಾಲೇಜಿನಲ್ಲಿ ಭಾನುವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಕಾರ್ಯಕಾರಿಣಿ ಸಮಿತಿ ಸಭೆ ಹಾಗೂ ಜಿಲ್ಲಾ ಮಟ್ಟದ ದ್ವಿತೀಯ ಸಮ್ಮೇಳನದಲ್ಲಿ ಮಾತನಾಡಿದರು.
ಅಂಬೇಡ್ಕರ್ ಕೃತಿಗಳನ್ನು ಓದಿ ಅವುಗಳಂತೆ ನಡೆದುಕೊಳ್ಳಬೇಕು. ಅಂಬೇಡ್ಕರ್ ಪುಸ್ತಕಗಳನ್ನು ಓದುತ್ತಿದ್ದರೆ, ಕಣ್ಣಲ್ಲಿ ನೀರು ಹರಿಯುತ್ತದೆ. ಅವರು ಸಮಾಜಕ್ಕಾಗಿ ಅಷ್ಟೊಂದು ಕಷ್ಟಪಟ್ಟಿದ್ದಾರೆ ಎಂದರು.
ಮಹರ್ಷಿ ವಾಲ್ಮೀಕಿ, ಭಕ್ತ ಕನಕದಾಸ, ಬುದ್ಧ, ಬಸವಣ್ಣ, ಅಂಬೇಡ್ಕರ್ ಅವರಂಥ ಮಹನೀಯರನ್ನು ಜಯಂತ್ಯುತ್ಸವ, ಪೂಜೆಗೆ ಸೀಮಿತ ಮಾಡುವುದು ಬೇಡ. ಭಕ್ತಿ ಗುಲಾಮಗಿರಿಗೆ ದೂಡುತ್ತದೆಂದು ಎಚ್ಚರಿಸಿದರು.
ನಿವೃತ್ತ ಹಾಗೂ ಬಡ್ತಿ ಪಡೆದ ನೌಕರರನ್ನು ಇದೇ ವೇಳೆ ಸನ್ಮಾನಿಸಲಾಯಿತು. ಸಂಘದ ಚಿತ್ರದುರ್ಗ-ದಾವಣಗೆರೆ ಶಾಖೆ ಅಧ್ಯಕ್ಷ ಎಸ್.ಮಂಜಣ್ಣ ಅಧ್ಯಕ್ಷತೆ ವಹಿಸಿದ್ದರು.
ಸಂಘದ ಕರ್ನಾಟಕ ಸರ್ಕಲ್ ವಲಯ ಕಾರ್ಯದರ್ಶಿ ವಿ.ಕೃಷ್ಣಮೂರ್ತಿ, ದಕ್ಷಿಣ ವಲಯ ಡೈರೆಕ್ಟರ್ ಪೋಸ್ಟಲ್ ಸರ್ವಿಸ್ ಮಹೇಂದ್ರ ಬಿ.ಜಿ., ಆರ್.ಶ್ರೀನಿವಾಸ್, ಜಿ.ಹರೀಶ್, ಆರ್.ಕರಿಸಿದ್ದಪ್ಪ, ಆರ್.ಅಶೋಕ, ವಿ.ಕೆಂಪಲಕ್ಕಮ್ಮ, ಪಿ.ಎಚ್.ರೇವಪ್ಪ, ಎನ್.ಎ.ಶ್ರೀನಿವಾಸ, ನಿವೃತ್ತ ಅಂಚೆ ಅಧೀಕ್ಷಕ ಒ.ಗೋವಿಂದಪ್ಪ ಇದ್ದರು.