

ಚಿತ್ರದುರ್ಗ: ನಗರ ಸೇರಿ ಜಿಲ್ಲೆಯ ವಿವಿಧೆಡೆಯ ಕೃಷಿ ಪರಿಕರ ಮಾರಾಟ ಮಳಿಗೆಗಳಿಗೆ ಜಂಟಿ ಕೃಷಿ ನಿರ್ದೇಶಕ ವಿ.ಸದಾಶಿವ ಹಾಗೂ ಸಹಾಯಕ ಕೃಷಿ ನಿರ್ದೇಶಕ (ಜಾರಿದಳ) ಕೆ.ಸಿ.ಪ್ರಸನ್ನ ಕುಮಾರ್ ಮತ್ತವರ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನಿಯಮಗಳ ಉಲ್ಲಂಘಿಸಿರುವ ಮಳಿಗೆ ಮಾಲೀಕರ ವಿರುದ್ಧ ಕ್ರಮ ಜರುಗಿಸಲಾಗಿದೆ.
ಬಿತ್ತನೆ ಬೀಜ, ಕೀಟನಾಶಕ ಕಾಯ್ದೆ ಹಾಗೂ ರಸಗೊಬ್ಬರ ನಿಯಂತ್ರಣ ಆದೇಶಗಳು ಮತ್ತು ನಿಯಮಗಳ ಉಲ್ಲಂಘನೆ ಕಂಡು ಬಂದವರ ವಿರುದ್ಧ ಕಾರಣ ಕೇಳಿ ನೋಟೀಸ್ ಜಾರಿ ಮಾಡಲಾಗಿದೆ, ಇನ್ನು ಕೆಲವು ಅಂಗಡಿಗಳಲ್ಲಿ ಮಾರಾಟ ಚಟುವಟಿಕೆಗೆ ತಡೆಯಾಜ್ಞೆ ನೀಡಲಾಗಿದೆ.
ಪರವಾನಗಿ ಪಡೆದಿರುವ ಎಲ್ಲ ಕೃಷಿ ಪರಿಕರಗಳ ಮಾರಾಟಗಾರರು ಮತ್ತು ಸಹಕಾರ ಸಂಘಗಳು ಕಾನೂನು ಪ್ರಕಾರ ವಹಿವಾಟು ನಡೆಸಬೇಕೆಂದು ಇದೇ ವೇಳೆ ಅಧಿಕಾರಿಗಳು ಎಚ್ಚರಿಕೆ ನೀಡಿದರು.
ಮಳಿಗೆಗಳಲ್ಲಿ ಪರವಾನಗಿ, ತಮ್ಮಲ್ಲಿ ಲಭ್ಯವಿರುವ ಎಲ್ಲ ಪರಿಕರಗಳ ದಾಸ್ತಾನು, ದರ ಪಟ್ಟಿ ಪ್ರದರ್ಶಿಸ ಬೇಕೆಂಬುದು ಹಲವು ನಿಯಮಗಳನ್ನು ಪಾಲಿಸ ಬೇಕೆಂದು ಸೂಚಿಸಿದರು.
ಪಾಸ್‌ಮೆಷಿನ್ ಕಡ್ಡಾಯ: ಸಹಾಯಧನ ದೊರಕುವಂಥ ಎಲ್ಲ ರಸಗೊಬ್ಬರಗಳ ಮಾರಾಟಕ್ಕೆ ಸಂಬಂಧಿಸಿದಂತೆ ರೈತರಿಗೆ ಪಾಸ್ ಮೆಷಿನ್ ಮೂಲಕವೇ ಬಿಲ್ ಕೊಡುವುದು ಕಡ್ಡಾಯ. ಯಾವುದೇ ಕಾರಣಕ್ಕೂ ಬಿಡಿಯಾಗಿ ಬಿತ್ತನೆ ಬೀಜ ಮಾರಾಟ ಮಾಡದಂತೆ ಮಾಲೀಕರಿಗೆ ಕಟ್ಟೆಚ್ಚರ ನೀಡಿದರು.