

ಚಿತ್ರದುರ್ಗ: ಅಕ್ರಮ ಬಿಪಿಎಲ್ ಕಾರ್ಡ್‌ಗಳನ್ನು ಮಟ್ಟ ಹಾಕದ ಹೊರತು, ಹೊಸದಾಗಿ ಅರ್ಜಿ ಸಲ್ಲಿಸಿರುವ 1.85 ಲಕ್ಷ ಕುಟುಂಬಗಳಿಗೆ ಬಿಪಿಲ್ ಕಾರ್ಡ್ ವಿತರಿಸುವುದಿಲ್ಲ ಎಂದು ಆಹಾರ ಮತ್ತು ನಾಗರಿಕರ ಸರಬರಾಜು ಸಚಿವ ಕೆ.ಗೋಪಾಲಯ್ಯ ತಿಳಿಸಿದರು.
ಚಿತ್ರದುರ್ಗದಲ್ಲಿ ಶನಿವಾರ ಗೋದಾಮುಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಬಳಕ ಮಾತನಾಢಿ, ಕಾನೂನು ವಿರುದ್ಧವಾಗಿ ಕಾರ್ಡ್‌ಗಳನ್ನು ಪಡೆದಿರುವಂಥವರು ಹಿಂತಿರುಗಿಸಲು ಜೂ.30ರ ವರೆಗೆ ಸಮಯವಿದೆ ಎಂದರು.
ಕರೊನಾ ಕಾರಣಕ್ಕೆ ಈಗಾಗಲೇ ಅಕ್ರಮವಾಗಿ ಕಾರ್ಡ್‌ಗಳನ್ನು ಹೊಂದಿರುವ ಉಳ್ಳವರು ಅವುಗಳನ್ನು ಹಿಂತಿರುಗಿಸಲು ಸಾಕಷ್ಟು ಸಮಯವಾಕಾಶವೂ ದೊರಕಿದೆ. ಈಗ ನಿಗದಿತ ಗಡುವಿನೊಳಗೆ ಮರಕಳಿಸದಿದ್ದರೆ ಸರ್ಕಾರ ತನ್ನದೇ ಆದ ಕ್ರಮ ಜರುಗಿಸಲಿದೆ ಎಂದು ಎಚ್ಚರಿಸಿದರು.
ಸಿಎಂ ಬಳಿ ಚರ್ಚಿಸಿ ಹೊಸ ಕಾರ್ಡ್ ವಿತರಣೆಗೆ ಕ್ರಮ ವಹಿಸಲಾಗುವುದು. ಈ ತಿಂಗಳ ಪಡಿತರ ಧಾನ್ಯ ವಿತರಣೆ ಜೂ.11ರ ಮುನ್ನ ಆಹಾರ ಇಲಾಖೆ ಐವರು ಹಿರಿಯ ಅಧಿಕಾರಿಗಳ ತಂಡ ಪ್ರತ್ಯೇಕವಾಗಿ ರಾಜ್ಯದ ಎಲ್ಲ ಜಿಲ್ಲೆ ಹಾಗೂ ಕೆಲವು ತಾಲೂಕುಗಳಿಗೆ ಭೇಟಿ ನೀಡಿ ಗೋದಾಮು, ಪಡಿತರ ವ್ಯವಸ್ಥೆ ಪರಿಶೀಲಿಸಲಿದೆ ಎಂದರು.
ವಲಸೆ ಕಾರ್ಮಿಕರಿಗೆ, ಕಾರ್ಡ್ ಇಲ್ಲದ ಬಡ ಕುಟುಂಬಗಳಿಗೆ ಆಧಾರ್ ಕಾರ್ಡ್ ಆಧರಿಸಿ ಆಹಾರ ಧಾನ್ಯ ವಿತರಿಸಲಾಗುವುದು ಎಂದು ತಿಳಿಸಿದರು.
ಅಕ್ಕಿ ಹಿಂದಕ್ಕೆ: ಕಡ್ಲೆಕಾಳು ಕಡಿಮೆ ತೂಕಕ್ಕೆ ಸಂಬಂಧಿಸಿದಂತೆ ಪಡಿತರ ಅಂಗಡಿ ಮಾಲೀಕನ ವಿರುದ್ಧ ಕ್ರಮಕ್ಕೆ ಸೂಚಿಸಿದ್ದೇನೆ. ನಗರದ ಎಪಿಎಂಸಿ ಆವರಣದಲ್ಲಿ ಗೋದಾಮಿನಲ್ಲಿ ಎಫ್‌ಸಿಐ 15 ದಿನಗಳ ಹಿಂದೆ ಪೂರೈಸಿರುವ ಅಂದಾಜು 51 ಕ್ವಿಂಟಾಲ್ ಅಕ್ಕಿಯಲ್ಲಿ ಹುಳುಗಳಿರುವುದನ್ನು ಗಮನಿಸಿದ ಸಚಿವರು, ನಿರ್ದಿಷ್ಟ ಪ್ರಮಾಣದ ಅಕ್ಕಿಯನ್ನು ಹಿಂದಕ್ಕೆ ಕಳಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದರು.
ಆಹಾರ ಇಲಾಖೆ ಡಿಡಿ ಮಧಸೂದನ್, ತಹಸೀಲ್ದಾರ್ ಜೆ.ಸಿ.ವೆಂಕಟೇಶಯ್ಯ, ಸಚಿವರ ವಿಶೇಷಾಧಿಕಾರಿ ಕಾಂತರಾಜ್, ತಾಲೂಕು ವ್ಯವಸ್ಥಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಮಂಜುನಾಥ್, ಸಂಘದ ಕಾರ್ಯದರ್ಶಿ ಉಮಾಶಂಕರ್, ನೌಕರ ಅಶೋಕ್, ಎಪಿಎಂಸಿ ಅಧ್ಯಕ್ಷ ಡಿ.ಎಸ್.ಶಶಿಧರ್ ಮತ್ತಿತರರು ಇದ್ದರು.