

ಚಿತ್ರದುರ್ಗ: ಕಳೆದೊಂದು ವಾರದಿಂದ ಚಳ್ಳಕೆರೆ, ಮೊಳಕಾಲ್ಮೂರು ತಾಲೂಕು ಹೊರತುಪಡಿಸಿ ಜಿಲ್ಲೆಯ ಉಳಿದೆಡೆ ವರುಣ ಅಬ್ಬರಿಸುತ್ತಿದ್ದು ವಾಡಿಕೆಗಿಂತ ಅಧಿಕ ಮಳೆ ಸುರಿದಿದೆ.
ಜಿಲ್ಲೆಯಾದ್ಯಂತ ವರುಣನ ಅಬ್ಬರ ಜೋರಾಗಿದ್ದು, ವಾಡಿಕೆಗಿಂತ ಹೆಚ್ಚಿನ ಮಳೆ ಸುರಿಯುತ್ತಿದೆ. ಇದರಿಂದಾಗಿ ಜನಜೀವನಕ್ಕೆ ಅಡೆತಡೆ ಉಂಟಾಗಿದೆ. ಹಲವೆಡೆ ಮನೆಗಳು ಧರೆಗುರುಳಿವೆ. ರಸ್ತೆಗಳಲ್ಲಿ ಮರಗಳು ಬಿದ್ದು ಸಂಚಾರಕ್ಕೆ ಅಡ್ಡಿಯಾಗಿದೆ.
ಕೋಟೆನಾಡು ಚಿತ್ರದುರ್ಗದಲ್ಲಿ ಜು.1ರಿಂದ 13ರವರೆಗೆ 41.6 ಮಿ.ಮೀಟರ್ ಮಳೆಯಾಗಿದ್ದು, ನಿಗದಿತ ಪ್ರಮಾಣಕ್ಕಿಂತ ದುಪ್ಪಟ್ಟು ಮಳೆ ಬಿದ್ದಿದೆ. ಜಿಲ್ಲೆಯಲ್ಲಿ ಈ ಅವಧಿಗೆ 20.2 ಮಿ.ಮೀ. ಮಳೆ ಬೀಳುವ ಸಾಧ್ಯತೆ ಇತ್ತು. ಆದರೆ, ವಾಡಿಕೆಗಿಂತ ಹೆಚ್ಚು ಬಿದ್ದಿರುವ ವರದಿಯಾಗಿದೆ.
ಚಿತ್ರದುರ್ಗದಲ್ಲಿ 24 ಮಿ.ಮೀ. ಅವಶ್ಯವಿದ್ದರೆ 55 ಮಿ.ಮೀ. ಮಳೆ ಬಿದ್ದಿದೆ. ಹಿರಿಯೂರು 18 ಮಿ.ಮೀ. ಅಗತ್ಯವಿದ್ದರೆ 26 ಮಿ.ಮೀ., ಹೊಳಲ್ಕೆರೆ 20 ಮಿ.ಮೀ. ನಿಗದಿತವಾಗಿದ್ದರೆ 39 ಮಿ.ಮೀ., ಹೊಸದುರ್ಗ 15 ಅವಶ್ಯವಿದ್ದರೆ 32 ಮಿ.ಮೀ., ಮೊಳಕಾಲ್ಮೂರು 12 ಮಿ.ಮೀ. ಅಗತ್ಯವಿದ್ದರೆ 7 ಮಿ.ಮೀಟರ್ ಮಳೆ ಸುರಿದಿದೆ.
ಆದರೆ ಹೆಚ್ಚಿನ ಮಳೆ ಸುರಿದು ಜನಜೀವನಕ್ಕೆ ಅಡ್ಡಿಯುಂಟು ಮಾಡಿದೆ. ಜಿಲ್ಲೆಯ ವಿವಿಧ ಭಾಗಗಳಲ್ಲಿ ತಡರಾತ್ರಿ ವರುಣನ ಅಬ್ಬರಕ್ಕೆ ಅಲ್ಲಲ್ಲಿ ಸಣ್ಣ ಪುಟ್ಟ ಕೆರೆ-ಕಟ್ಟೆಗಳು, ಕೃಷಿ ಹೊಂಡ, ಚೆಕ್ ಡ್ಯಾಂಗಳು ಭರ್ತಿಯಾಗಿ ಹರಿಯುತ್ತಿವೆ.
ಮೊಳಕಾಲ್ಮೂರು, ಚಳ್ಳಕೆರೆಯಲ್ಲಿ ಕಡಿಮೆ ಮಳೆ: ಹೊಳಲ್ಕೆರೆ-ಹೊಸದುರ್ಗ ಭಾಗದಲ್ಲಿ ಅತಿ ಹೆಚ್ಚು ಮಳೆಯಾಗಿದ್ದು, ಮೊಳಕಾಲ್ಮೂರು ತಾಲೂಕಿನಲ್ಲಿ ಮಾತ್ರ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಈ ತಾಲೂಕುಗಳಲ್ಲಿ ವರುಣನ ಆರ್ಭಟವಿಲ್ಲ.
83 ಮನೆಗಳು ಭಾಗಶಃ ಧರೆಗೆ: ಕಳೆದ 13 ದಿನಗಳಲ್ಲಿ ಜಿಲ್ಲೆಯಲ್ಲಿ ಮಳೆಯಿಂದಾಗಿ ಒಟ್ಟು 83 ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಹಿರಿಯೂರು, ಹೊಳಲ್ಕೆರೆ ಹಾಗೂ ಚಿತ್ರದುರ್ಗ ಭಾಗದಲ್ಲಿ ಹೆಚ್ಚಿನ ಮನೆಗಳು ಕುಸಿದಿವೆ. ಚಿತ್ರದುರ್ಗ 21, ಚಳ್ಳಕೆರೆ 1, ಮೊಳಕಾಲ್ಮೂರು 6, ಹೊಳಲ್ಕೆರೆ 24, ಹಿರಿಯೂರು 26 ಹಾಗೂ ಹೊಸದುರ್ಗದಲ್ಲಿ 5 ಮನೆಗಳು ನೆಲಕ್ಕುರುಳಿವೆ ಎಂದು ಜಿಲ್ಲಾಧಿಕಾರಿ ಕಚೇರಿ ಹವಾಮಾನ ತಜ್ಞರು ‘ವಿಜಯವಾಣಿ’ಗೆ ಮಾಹಿತಿ ನೀಡಿದ್ದಾರೆ.
ಒಟ್ಟಾರೆ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಕಳೆದ ಕೆಲ ದಿನಗಳಿಂದಲೂ ಮೋಡ ಕವಿದ ವಾತಾವರಣ ಸೃಷ್ಟಿಯಾಗಿದೆ. ಪ್ರತಿ ನಿತ್ಯ ಜಿಟಿ ಜಿಟಿ ಮಳೆ ಸುರಿಯುವ ಕಾರಣ ಜನತೆ ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿರುವುದು ಸಾಮಾನ್ಯವಾಗಿದೆ.