ಆಡುಮಲ್ಲೇಶ್ವರ ಝೂನಲ್ಲಿ ಸಂತಾನ ಸಂಭ್ರಮ

CTD 25 NEELGAY (5)
Published on

ಚಿತ್ರದುರ್ಗ: ಜೋಗಿಮಟ್ಟಿ ಆಡುಮಲ್ಲೇಶ್ವರ ಕಿರು ಮೃಗಾಲಯದಲ್ಲಿ ಈಗ ಸಂತಾನ ಸಂಭ್ರಮ. ಇತ್ತೀಚೆಗೆ ನಿಲ್ಗಾಯ್ ಮೂರು ಮರಿಗಳಿಗೆ ಹಾಗೂ ನರಿ ಎರಡು ಮರಿಗಳಿಗೆ ಜನ್ಮ ನೀಡಿವೆ.

ಒಂದು ಹೆಣ್ಣು ಹಾಗೂ ಎರಡು ಗಂಡು ನಿಲ್ಗಾಯ್, ಒಂದು ಗಂಡು ಹಾಗೂ ಒಂದು ಹೆಣ್ಣು ನರಿ ಮರಿ ಮೃಗಾಲಯಕ್ಕೆ ಹೊಸ ಅತಿಥಿಗಳಾಗಿವೆ.

ಸದ್ಯದಲ್ಲೇ ಚುಕ್ಕೆ ಜಿಂಕೆ ಮರಿಗಳ ಜನನವನ್ನು ನಿರೀಕ್ಷಿಸಲಾಗಿದೆ. ಕೋಳಿ ಜಾತಿಯ ಪಕ್ಷಿಗಳ ಸಹಿತ 50ಕ್ಕೂ ನಾನಾ ಜಾತಿಯ ಪಕ್ಷಿಗಳು ವೀಕ್ಷಕರನ್ನು ಸೆಳೆಯುತ್ತಿವೆ. ಹೊಸದಾಗಿ ಸ್ಥಾಪಿಸಿರುವ ಚಿರತೆ, ಕರಡಿ ಆವರಣಗಳಿಗೆ ಆಯಾ ಪ್ರಾಣಿಗಳನ್ನು ಬಿಡಲಾಗಿದೆ. ಪ್ರಸ್ತುತ ಮೈಸೂರಿಂದ ಇತ್ತೀಚೆಗೆ ಬಂದಿರುವ ಎರಡು ಗಂಡು ಸಹಿತ ಆರು ಚಿರತೆ ಹಾಗೂ ಎರಡು ಕರಡಿಗಳನ್ನು ವಿಶಾಲವಾಗಿ ನಿರ್ಮಿಸಲಾಗಿರುವ ಹೊಸ ಆವರಣಗಳಿಗೆ ಸ್ಥಳಾಂತರಿಸಲಾಗಿದೆ.

ಕೆಲವು ನಿಲ್ಗಾಯ್‌ಗಳನ್ನು ಮೈಸೂರು ಚಾಮರಾಜೇಂದ್ರ ಮೃಗಾಲಯಕ್ಕೆ ಕೊಟ್ಟು ಅಲ್ಲಿಂದ ಒಂದು ಗಂಡು, ಎರಡು ಹೆಣ್ಣು ಝೀಬ್ರಾಗಳನ್ನು ಹಾಗೂ ಒಂದು ಜತೆ ಹುಲಿಗಳನ್ನು ತರಲಾಗುತ್ತಿದೆ. ಸದ್ಯದಲ್ಲೇ ಮೈಸೂರು ಮೃಗಾಲಯಕ್ಕೆ ಇಸ್ರೇಲ್‌ನಿಂದ ಝೀಬ್ರಾಗಳು ಬರುತ್ತಿದ್ದಂತೆ ಮೈಸೂರಿನಲ್ಲಿರುವ ಈ ಮೂರು ಝೀಬ್ರಾಗಳು ದುರ್ಗವನ್ನು ಸೇರಲಿವೆ.

ಮೈಸೂರಿಂದ ಹುಲಿ: ಶೀಘ್ರದಲ್ಲೇ ಆಡುಮಲ್ಲೇಶ್ವರ ಮೃಗಾಲಯದಲ್ಲಿ ಐದಾರು ತಿಂಗಳಲ್ಲಿ ಹುಲಿ ಆವರಣ ನಿರ್ಮಾಣವಾಗಲಿದ್ದು, ಕೇಜ್ ನಿರ್ಮಾಣ ಕಾಮಗಾರಿ ಪೂರ್ಣವಾಗುತ್ತಿದ್ದಂತೆ ಮೈಸೂರಿನಲ್ಲಿರುವ ಎರಡು ಹುಲಿಗಳು ಇಲ್ಲಿಗೆ ಬರಲಿವೆ. ಇನ್ನು ಹುಲಿಗಳನ್ನು ತರುತ್ತಿರುವ ಹಿನ್ನೆಲೆಯ ಲ್ಲಿ ಮೃಗಾಲಯದ ಆವರಣದಲ್ಲಿ ಪಶುವೈದ್ಯಕೀಯ ಆಸ್ಪತ್ರೆ ನಿರ್ಮಿಸಲಾಗುತ್ತಿದೆ. ಗದಗದಲ್ಲಿದ್ದ ಒಂದು ಪಶುವೈದ್ಯರ ಹುದ್ದೆಯನ್ನು ಇಲ್ಲಿಗೆ ಸ್ಥಳಾಂತರಿಸಲಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net