

ಚಿತ್ರದುರ್ಗ: ನಗರದ ಶ್ರೀ ಕಬೀರಾನಂದಾಶ್ರಮದಲ್ಲಿ ಫೆ.17ರಂದು ಆರಂಭವಾಗಿದ್ದ 90ನೇ ಮಹಾಶಿವರಾತ್ರಿ ಮಹೋತ್ಸವ ಶ್ರೀ ಶಿವಲಿಂಗಾನಂದ ಸ್ವಾಮೀಜಿ ಅವರ ಕೌದಿ ಪೂಜೆಯೊಂದಿಗೆ ಶನಿವಾರ ಸಂಜೆ ಸಂಪನ್ನಗೊಂಡಿತು.
ಬೆಳಗ್ಗೆ ಬ್ರಾಹ್ಮೀ ಮಹೂರ್ತದಲ್ಲಿ ಶಿವ ಮಹಿಮ್ನಾ ಸ್ತೋತ್ರ ವಿಭೂತಿ ಸ್ನಾನ, ಸಂಜೆ 5ಕ್ಕೆ ಸನ್ಯಾಸಿ ವಿಧಿಯಂತೆ ಕೌದಿಪೂಜೆ ಸಮಯದಲ್ಲಿ ಶ್ರೀ ಶಿವಲಿಂಗಾನಂದ ಸ್ವಾಮೀಜಿ, ಕಾವಿ ಬದಲು ಚಿಂದಿ ಬಟ್ಟೆಯಿಂದ ಹೊಲಿದ ಕೌದಿ ಧರಿಸಿ ಕೊರಳಲ್ಲಿ ರುದ್ರಾಕ್ಷಿ ಹಾಗೂ ಹೂವಿನ ಹಾರ ಹಾಕಿಕೊಂಡು ಕೈಯಲ್ಲಿ ಕಮಂಡಲ, ಭಿಕ್ಷಾ ಪಾತ್ರೆ ಹಿಡಿದು ಮಠದ ಸುತ್ತ ಮೂರು ಸುತ್ತು ಭಿಕ್ಷಾಟನೆ ನಡೆಸಿದರು.
ಸನ್ಯಾಸಿಯಾದವನು ಸಂಪತ್ತಿನಿಂದ ದೂರವಿರಬೇಕು. ಆಡಂಬರದ ಜೀವನ ಸಲ್ಲದು, ಸರಳ ಜೀವನ ನಡೆಸಬೇಕೆನ್ನುವ ಉದ್ದೇಶದಿಂದ ಕೌದಿ ಧರಿಸಿ ಭಿಕ್ಷಾಟನೆ ಮಾಡುವುದು ಈ ಪೂಜೆ ವಿಶೇಷವೆಂದು ಶ್ರೀಗಳು ಹೇಳಿದರು.
ಕೌದಿ ಪೂಜೆ ಧರಿಸಿ ಆಶ್ರಮದಿಂದ ಶ್ರೀಗಳು ಹೊರ ಬರುತ್ತಿದ್ದಂತೆ ನೂರಾರು ಭಕ್ತರು ಆಶೀರ್ವಾದ ಪಡೆದರು.
ಕಬೀರಾನಂದಾಶ್ರಮದ ಕಾರ್ಯದರ್ಶಿ ವಿ.ಎಲ್.ಪ್ರಶಾಂತ್, ವಿ.ಎಲ್.ಪ್ರವೀಣ್, ನಿರಂಜನ್, ಗಿರೀಶ್, ಶರಣಪ್ಪ, ವಕೀಲ ಪ್ರತಾಪ್ ಜೋಗಿ, ಪರುಷೋತ್ತಮ ನಾಯಕ, ಮಂಜುನಾಥಗುಪ್ತ, ಡಿ.ಗೋಪಾಲಸ್ವಾಮಿ ನಾಯಕ, ಜಿತೇಂದ್ರ ಇತರರು ಇದ್ದರು.