

ಚಿತ್ರದುರ್ಗ: ಸಾಮೂಹಿಕ ಸಮಾರಂಭ ಆಯೋಜನೆಗೆ ನಿಷೇಧವಿರುವ ಹಿನ್ನೆಲೆಯಲ್ಲಿ ಜೂ.21 ರಂದು 6ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಮನೆಯಲ್ಲೇ ಆಚರಿಸುವಂತೆ ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ ನಾಗರಿಕರಿಗೆ ಮನವಿ ಮಾಡಿದ್ದಾರೆ.
ಈ ಮೊದಲು ಯೋಗ ದಿನದಂದು ನಗರದ ಹಳೇ ಮಾಧ್ಯಮಿಕ ಶಾಲಾ ಆವರಣ ಸಹಿತ ಜಿಲ್ಲೆಯ ಹಲವೆಡೆ ಬಹಿರಂಗವಾಗಿ ವೇದಿಕೆ ಸಮಾರಂಭಗಳೊಂದಿಗೆ ಸಾಮೂಹಿಕ ಯೋಗ ಪ್ರದರ್ಶನ ಆಯೋಜಿಸಲಾಗುತ್ತಿತ್ತು. ಈ ಬಾರಿ ಅದಕ್ಕೆ ಅವಕಾಶವಿಲ್ಲ. ಕೇಂದ್ರ ಸರ್ಕಾರ ಮನೆಯಲ್ಲೇ ಯೋಗ, ಕುಟುಂಬದೊಂದಿಗೆ ಯೋಗ ಎಂಬ ಘೋಷ ವಾಕ್ಯ ನೀಡಿದ್ದು, ಮನೆಯಲ್ಲಿ ಆಚರಿಸಲು ಆಯುಷ್ ಮಂತ್ರಾಲಯ ಕೋರಿದೆ. ಜಿಲ್ಲೆಯ ವಿವಿಧ ಯೋಗ ಸಂಸ್ಥೆಗಳು ಯೋಗ ದಿನವನ್ನು ಈ ಬಾರಿ ವಿಶೇಷವಾಗಿ ಆಯೋಜಿಸಲಿವೆ.
ಜಿಲ್ಲಾ ಯೋಗ ಸಂಸ್ಥೆ, ಪತಂಜಲಿ ಯೋಗ ಸಂಸ್ಥೆ, ಶ್ರೀಪತಂಜಲಿ ಯೋಗ ಸಂಸ್ಥೆ, ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯ, ಆರ್ಟ್ ಆಫ್ ಲಿವಿಂಗ್, ಎಸ್‌ಎಸ್‌ವೈ ಚಿತ್ರದುರ್ಗ ಹಾಗೂ ಇತರೆ ಯೋಗ ಸಂಸ್ಥೆ ಪದಾಧಿಕಾರಿಗಳು ಮನೆಯಲ್ಲಿ ನಾಗರಿಕರು ಯೋಗ ದಿನವನ್ನು ಆಚರಿಸುವ ನಿಟ್ಟಿನಲ್ಲಿ ಸಹಕರಿಸಲಿದ್ದಾರೆ.
ಅಂದು ಬೆಳಗ್ಗೆ 6.15 ರಿಂದ 8 ಗಂಟೆವರೆಗೆ ದೂರದರ್ಶನದ ಎಲ್ಲ ವಾಹಿನಿಗಳಲ್ಲಿ ಪ್ರಧಾನ ಮಂತ್ರಿ, ಕೇಂದ್ರ ಆಯುಷ್ ಸಚಿವರು ಹಾಗೂ ಇತರೆ ಗಣ್ಯರು ಸಂದೇಶ ನೀಡಲಿದ್ದಾರೆ. 7 ರಿಂದ 7.45 ರವರೆಗೆ ಸರಳ ಯೋಗಾಸನ ಪ್ರಸಾರವಾಗಲಿದೆ. ಯೋಗಾಸಕ್ತರು ಯೋಗಾಭ್ಯಾಸದ ಪೋಟೊಗಳನ್ನು 9632893538 ವಾಟ್ಸ್ ಆ್ಯಪ್ ಅಥವಾ ್ಚಜಿಠ್ಟಿಛ್ಠ್ಟಜಢ್ಠಟ್ಛ್ಛಜ್ಚಿಛ್ಟಿಃಜಞಜ್ಝಿ.್ಚಟಞ ಗೆ ಬೆಳಗ್ಗೆ 10.30 ರೊಳಗೆ ಕಳುಹಿಸುವಂತೆ ಜಿಲ್ಲಾಧಿಕಾರಿ ಕೋರಿದ್ದಾರೆ.