ಧರ್ಮ ಧೀರ್ಘಕಾಲದ ರಾಜಕಾರಣ

CTD 22 KABIRA
Published on

ಚಿತ್ರದುರ್ಗ: ರಾಜಕಾರಣವೆಂಬುದು ಅಲ್ಪಕಾಲಿಕ ಧರ್ಮ, ಧರ್ಮವೆಂಬುದು ದೀರ್ಘಕಾಲದ ರಾಜಕೀಯ ಎಂದು ಸಿರಿಗೆರೆ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ಕಬೀರಾನಂದಾಶ್ರಮದಲ್ಲಿ 90ನೇ ಮಹಾಶಿವರಾತ್ರಿ ಮಹೋತ್ಸವದ ಅಂಗವಾಗಿ ಶುಕ್ರವಾರ ರಾತ್ರಿ ಆಯೋಜಿಸಿದ್ದ ಸಮಾರಂಭವವನ್ನು ಉದ್ಘಾಟಿಸಿ ಮಾತನಾಡಿ, ಅಸೂಯೆ, ದ್ವೇಷ, ದುರ್ಗುಣ ರಹಿತವಾಗಿ ನ್ಯಾಯದಿಂದ ಬದುಕುವುದೇ ನಿಜವಾದ ಧರ್ಮ ಎಂದರು.

ಒಂದು ದಿನ ಎಚ್ಚರವಿರವಿದ್ದು ಶಿವರಾತ್ರಿ ಆಚರಿಸುವುದಲ್ಲ. ನಮ್ಮ ಬದುಕಿನಲ್ಲಿ ಸದಾ ಜಾಗೃತವಾಗಿ ಇರಬೇಕೆಂಬುದನ್ನು ಶಿವರಾತ್ರಿ ಕಲಿಸುತ್ತದೆ. ಉತ್ತಮ ನಡವಳಿಕೆ ಅರಿವನ್ನು ಗಳಿಸಬೇಕೆಂಬುದು ಶಿವರಾತ್ರಿಗೆ ಇರುವ ತಾತ್ವಿಕ ಕಾರಣವಾಗಿದ್ದು, ಇದನ್ನು ಅರ್ಥಪೂರ್ಣವಾಗಿ ಆಚರಿಸದಿದ್ದರೆ ಅದೊಂದು ಜಡ್ಡುಗಟ್ಟಿದ ಸಂಪ್ರದಾಯವಾಗುತ್ತದೆ ಎಂದು ಎಚ್ಚರಿಸಿದರು.

ವಸಂತ ಕಾಲದ ಪ್ರಕೃತಿ ಹೇಗೆ ಮುದ ನೀಡುತ್ತದೆಯೋ, ಅದೇ ರೀತಿ ಹಬ್ಬ-ಹರಿದಿನಗಳು ಮನುಷ್ಯನ ಮನಸ್ಸಿಗೆ ಮುದ ನೀಡುತ್ತವೆ. ಪ್ರಜ್ಞೆಯಿಲ್ಲದೆ ಮಾಡುವ ಕೆಲಸದಿಂದ ಒಳ್ಳೆಯದಾಗದು. ಶ್ರದ್ಧಾ, ಭಕ್ತಿಯಿಲ್ಲದ ಪೂಜೆಯಿಂದ ಎಂದಿಗೂ ಉತ್ತಮ ಫಲ ಸಿಗದು ಎಂದರು.

ನಿವೃತ್ತ ಆಂಗ್ಲ ಪ್ರಾಧ್ಯಾಪಕ ಶರಣಪ್ಪ ಮಾತನಾಡಿ, 21ನೇ ಶತಮಾನದಲ್ಲಿ ವಿಜ್ಞಾನ, ತಂತ್ರಜ್ಞಾನ ಶರವೇಗದಲ್ಲಿ ಬೆಳೆಯುತ್ತಿರುವುದು ಹೆಮ್ಮೆ ವಿಚಾರ ಎಂದು ತಿಳಿಸಿದರು.

ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಮಾತನಾಡಿ, ಶಿವಲಿಂಗಾನಂದ ಶ್ರೀಗಳು ಉತ್ತಮ ಕೆಲಸಗಳನ್ನು ಮಾಡುತ್ತಿದ್ದಾರೆ. ಗೋಶಾಲೆ, ವೃದ್ಧಾಶ್ರಮ, ಅನ್ನ, ಜ್ಞಾನ ದಾಸೋಹ ಮೊದಲಾದ ಸೇವೆಗಳ ಮೂಲಕ ಸಾಮಾಜಿಕ ಕಾಳಜಿಯನ್ನು ನಿರಂತರ ನಿಬಾಯಿಸುತ್ತಿದ್ದು, ಇದು ಮಾದರಿ ಕಾರ್ಯ ಆಗಿದೆ ಎಂದರು.

ಶ್ರೀ ಶಿವಲಿಂಗಾನಂದ ಸ್ವಾಮೀಜಿ, ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಎಲೆರಾಂಪುರ ಕುಂಚಿಟಿಗ ಮಠದ ಶ್ರೀ ಹನುಮಂತನಾಥ ಸ್ವಾಮೀಜಿ, ಕೂಸನೂರು ತಿಪ್ಪಯ್ಯಸ್ವಾಮಿ ಮಠದ ಶ್ರೀ ಜ್ಯೋತಿರ್ಲಿಂಗಾನಂದ ಸ್ವಾಮೀಜಿ, ಮಾಜಿ ಸಚಿವ ಎಚ್.ಆಂಜನೇಯ, ಬಾಪೂಜಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಕೆ.ಎಂ.ವೀರೇಶ್, ಉದ್ಯಮಿಗಳಾದ ಬಿ.ಟಿ.ಸಿದ್ದೇಶ್, ರುದ್ರಮುನಿ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಕೆ.ಎಸ್.ನವೀನ್, ಗ್ರಾಮಾಂತರ ಘಟಕದ ಅಧ್ಯಕ್ಷ ನಂದಿ ನಾಗರಾಜ್, ನಗರಸಭೆ ಸದಸ್ಯ ಶ್ರೀನಿವಾಸ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net