

ಚಿತ್ರದುರ್ಗ: ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗ ಯೋಜನೆ ಪೂರ್ಣಗೊಂಡು ಸಂಚಾರ ಆರಂಭವಾಗುವ ಹೊತ್ತಿಗೆ ನಾನಂತೂ ರಿಟೈರ್ಡ್ ಆಗಿರುತ್ತೇನೆ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು.
ಡಿಸಿ ಕಚೇರಿಯಲ್ಲಿ ಮಂಗಳವಾರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಯೋಜನೆ ಕಾಮಗಾರಿ ವಿಳಂಬಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದರು.
ರೈಲುಗಳ ಓಡಾಟ ಆರಂಭವಾಗುವುದಕ್ಕೆ ಇನ್ನೂ ಎಷ್ಟು ವರ್ಷ ಬೇಕಾಗುತ್ತದೆಯೋ? ಮುಗಿದಾಗ ನಾನು ನಿವೃತ್ತನಾಗಿರುತ್ತೇನೆ ಎನಿಸುತ್ತದೆ. ನಾರಾಯಣ ಸ್ವಾಮಿ ಸಂಸದರಾಗಿರಬಹುದು ಎಂದರು.
ನಗರದ ತುರುವನೂರು ರಸ್ತೆಯಲ್ಲೂ ಮತ್ತೊಂದು ನಿಲ್ದಾಣಕ್ಕೆ ಪ್ಲಾನ್ ಮಾಡುವಂತೆ ರೈಲ್ವೆ ಅಧಿಕಾರಿಗಳಿಗೆ ಕೋರಿದರು. ನಿಮ್ಮ ಇಲಾಖೆ ಸಮುದ್ರವಿದ್ದಂತೆ. ಯಾರನ್ನು ಕಂಡು ಮಾತನಾಡಬೇಕು ಎನ್ನುವುದರೊಳಗೆ ವರ್ಷ ಸವೆದಿರುತ್ತದೆ ಎಂದು ಇಲಾಖೆ ಅಧಿಕಾರಿಗಳ ನಡೆಗೆ ಅಸಮಾಧಾನ ವ್ಯಕ್ತಪಡಿಸಿದರು.
ಭೂಮಿ, ಮನೆ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ಕೊಡಿ. ದೊಡ್ಡ ಮನೆ ಕಳೆದುಕೊಂಡವರಿಗೆ ಒಂದೆರಡು ಲಕ್ಷ ರೂ. ವೆಚ್ಚದ ಮನೆ ಮಂಜೂರು ಮಾಡಿದರೆ ಪ್ರಯೋಜನವಿಲ್ಲ. ಶೇ.50 ಕ್ಕಿಂತ ಹೆಚ್ಚು ಭೂಮಿ ಕಳೆದುಕೊಂಡರೆ ಹೆಚ್ಚುವರಿ ಪರಿಹಾರ 5 ಲಕ್ಷ ರೂ. ಹೆಚ್ಚಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕೆಂದು ಡಿಸಿಗೆ ತಿಳಿಸಿದರು.
ಸಂಸದ ಎ.ನಾರಾಯಣಸ್ವಾಮಿ ಮಾತನಾಡಿ, ಭೂಮಿ ಸ್ವಾಧೀನವಾಗಿ 5-10 ಗುಂಟೆ ಜಮೀನು ಉಳಿದರೆ ಅದನ್ನೂ ರೈಲ್ವೆಯವರೇ ಸ್ವಾಧೀನ ಮಾಡಿಕೊಳ್ಳಬೇಕೆಂಬ ಸಭೆ ನಿರ್ಣಯವನ್ನು ಮೇಲಧಿಕಾರಿಗಳಿಗೆ ತಿಳಿಸಿ ಎಂದು ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ತುಂಡು ಭೂಮಿ ಇಟ್ಟುಕೊಂಡು ರೈತ ಏನು ಮಾಡಲು ಸಾಧ್ಯ? ಜಮೀನು ಮಧ್ಯೆ ಮಾರ್ಗವಿದ್ದರೆ ರೈತನ ಓಡಾಟಕ್ಕೆ ಅನುಕೂಲ ಮಾಡಿಕೊಡಬೇಕೆಂದರು.
ಭೂಮಿಗೆ ಹೆಚ್ಚಿನ ಪರಿಹಾರ, ಸರ್ಕಾರಿ ನೌಕರಿ ಕೇಳುತ್ತಿದ್ದಾರೆಂದು ಎಡಿಸಿ ಸಿ.ಸಂಗಪ್ಪ ಸಭೆಗೆ ತಿಳಿಸಿದರು. ಚಿತ್ರದುರ್ಗ ತಾಲೂಕಿನಲ್ಲಿ 2018ನವೆಂಬರ್‌ನಲ್ಲಿ ತಿಂಗಳಲ್ಲಿ 11(1)ಅಧಿಸೂಚನೆ ಆಗಿದೆ. ಕೋವಿಡ್ ಹಿನ್ನೆಲೆ ವಿಳಂಬವಾಗಿದ್ದು, 2020 ಸೆಪ್ಟೆಂಬರ್‌ವೊಳಗೆ ಭೂ ಸ್ವಾಧೀನ ಪೂರ್ಣಗೊಳಿಸಲು ಅನುಮತಿ ದೊರೆತಿದೆ ಎಂದರು.
286.57 ಕೋಟಿ ರೂ.ವೆಚ್ಚದಲ್ಲಿ ಚಿತ್ರದುರ್ಗ ತಾಲೂಕಿನ 25 ಗ್ರಾಮಗಳ 444.12 ಎಕರೆ ಭೂ ಸ್ವಾಧೀನಕ್ಕೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಡಿಸಿ ಆರ್.ವಿನೋತ್‌ಪ್ರಿಯಾ ಹೇಳಿದರು. 201.47 ಕಿ.ಮೀ.ದೂರವಿರುವ ಈ ನೂತನ ಮಾರ್ಗದಿಂದ, ತುಮಕೂರು- ದಾವಣಗೆರೆ ನಡುವಿನ ಅಂತರ 53.71 ಕಿ.ಮೀ. ಕಡಿಮೆಯಾಗಲಿದೆ. ಡಿಎಸ್‌ಹಳ್ಳಿಯಿಂದ ಹಂಪನೂರುವರೆಗೆ 46.58 ಕಿ.ಮೀ.ಮಾರ್ಗ ನಿರ್ಮಾಣವಾಗಬೇಕಿದೆ. ಡಿಎಸ್‌ಹಳ್ಳಿ, ಸಿರಿಗೆರೆ, ಭರಮಸಾಗರ ಹಾಗೂ ಚಿತ್ರದುರ್ಗದಲ್ಲಿ ಹೊಸ ನಿಲ್ದಾಣಗಳನ್ನು ಪ್ರಸ್ತಾಪಿಸಲಾಗಿದೆ ಎಂದರು.
ಜಿಪಂ ಅಧ್ಯಕ್ಷೆ ಶಶಿಕಲಾ ಸುರೇಶ್‌ಬಾಬು, ಎಸಿ ವಿ.ಪ್ರಸನ್ನ, ನೈರುತ್ಯ ರೈಲ್ವೆ ಇಲಾಖೆ ಭೂ ಕೋರಿಕೆ ವಿಭಾಗದ ಸೀನಿಯರ್ ಸೆಕ್ಷನ್ ಇಂಜಿನಿಯರ್ ಶಶಿಧರ್, ಕಾರ್ಯನಿರ್ವಾಹಕ ಇಂಜಿನಿಯರ್ ವೇಣುಗೋಪಾಲ್, ಚಿತ್ರದುರ್ಗ ತಾಲೂಕಿನ ಸಂಬಂಧಿಸಿದ ಗ್ರಾಪಂ ಅಧ್ಯಕ್ಷರು, ಪಿಡಿಒ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಇದ್ದರು.