

ಚಿತ್ರದುರ್ಗ: ಜಿಲ್ಲೆಯಲ್ಲಿ ಕೋವಿಡ್-19 ವೈರಸ್ ಸಂಬಂಧಿಸಿದಂತೆ ಗಂಟಲು ದ್ರವದ ಪರೀಕ್ಷಾ ವರದಿ ಬಾಕಿ ಉಳಿದಿದ್ದ ಎಲ್ಲ ವರದಿಗಳು ನೆಗೆಟಿವ್ ಬಂದಿದ್ದು, ಜಿಲ್ಲೆ ಈಗ ಸೋಂಕು ಮುಕ್ತವಾಗಿದೆ ಎಂದು ಡಿಎಚ್‌ಒ ಡಾ.ಸಿ.ಎಲ್.ಪಾಲಾಕ್ಷ ತಿಳಿಸಿದ್ದಾರೆ.
ಚಿತ್ರದುರ್ಗದಲ್ಲಿ ಕೋವಿಡ್-19 ಸೋಂಕು ಪತ್ತೆ ಪ್ರಯೋಗಾಲಯವೂ ಇತ್ತೀಚೆಗೆ ಕಾರ್ಯಾರಂಭ ಮಾಡಿದೆ. ಜೂ.16ರಂದು 14 ಜನರ ವರದಿ ಬಾಕಿ ಇತ್ತು. ಬುಧವಾರ 54 ಶಂಕಿತ ವ್ಯಕ್ತಿಗಳ ಗಂಟಲು ದ್ರವ ಮಾದರಿಯನ್ನು ಪರೀಕ್ಷಿಸಲಾಗಿದ್ದು, ಎಲ್ಲ 68 ಜನರ ಪ್ರಯೋಗಾಲಯ ವರದಿ ನೆಗೆಟಿವ್ ಬಂದಿದೆ ಎಂದಿದಾರೆ.
ಜಿಲ್ಲೆಯಲ್ಲಿ ಸೋಂಕಿತರಾಗಿದ್ದ 43 ಜನರು ಚೇತರಿಸಿಕೊಂಡಿದ್ದಾರೆ. ಈವರೆಗೆ 4156 ಜನರ ಮಾದರಿ ಸಂಗ್ರಹಿಸಲಾಗಿದ್ದು, 3989 ಜನರ ವರದಿ ನೆಗೆಟೀವ್ ಬಂದಿದೆ. ಉಳಿದ 126 ಮಾದರಿಗಳನ್ನು ತಿರಸ್ಕರಿಸಲಾಗಿದೆ. ಸದ್ಯಕ್ಕೆ 2989 ಜನರು ಜಿಲ್ಲೆಯಲ್ಲಿ ಹೋಂ ಕ್ವಾರಂಟೈನ್‌ನಲ್ಲಿದ್ದಾರೆ ಎಂದು ತಿಳಿಸಿದ್ದಾರೆ.