

ಚಿತ್ರದುರ್ಗ: ರಾಜ್ಯದ ಎಲ್ಲ ಗ್ರಾಪಂ ಸಿಬ್ಬಂದಿಯ ಬಾಕಿ ವೇತನ ಬಿಡುಗಡೆಗೆ ತಕ್ಷಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಜಿಲ್ಲಾ ಪಂಚಾಯಿತಿ ಎದುರು ಸೋಮವಾರ ನೌಕರರು ಪ್ರತಿಭಟನೆ ನಡೆಸಿದರು.
ಪ್ರವಾಸಿ ಮಂದಿರದಿಂದ ಮೆರವಣಿಗೆ ಮೂಲಕ ಜಿಲ್ಲಾ ಪಂಚಾಯಿತಿಗೆ ತೆರಳಿದ ನೌಕರರು ವೇತನ ಬಿಡುಗಡೆಗೆ ಸತಾಯಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ವೇತನ ಬಾಕಿ ಪಾವತಿಗಾಗಿ ಬಜೆಟ್‌ನಲ್ಲಿ ಅನುದಾನ ಕಾಯ್ದಿರಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಒತ್ತಾಯಿಸಿದರು.
ಗ್ರಾಪಂ ಸಿಬ್ಬಂದಿಗೆ ಇಎಫ್‌ಎಂಎಸ್, ವರ್ಗ 1 ಹಾಗೂ 14ನೇ ಹಣಕಾಸು ನಿಧಿಯಡಿ ವೇತನ ಪಾವತಿಸಲು ಅವಕಾಶವಿದೆ. ಇಎಂಎಫ್‌ಎಸ್ ಅಡಿ ಮಂಜೂರಾಗಿದ್ದ 900 ಕೋಟಿ ರೂ. ಪೈಕಿ ಹಿಂದಿನ ಸರ್ಕಾರ 518 ಕೋಟಿ ರೂ. ಬಿಡುಗಡೆ ಮಾಡಿದ್ದು, 382 ಕೋಟಿ ರೂ. ಬಾಕಿ ಇದೆ. ರಾಜ್ಯದ 6,024 ಗ್ರಾಮ ಪಂಚಾಯಿತಿಗಳ 65 ಸಾವಿರಕ್ಕೂ ಹೆಚ್ಚಿನ ವೇತನಕ್ಕೆ ವಾರ್ಷಿಕ 900 ಕೋಟಿ ರೂ. ಅಗತ್ಯವಿದೆ.
ತ್ರೈಮಾಸಿಕ ಕಂತುಗಳಲ್ಲಿ ಬಿಡುಗಡೆಯಾಗುವ ಹಣ ಎರಡು ತಿಂಗಳಿಗೆ ಸಾಕಾಗುತ್ತಿದ್ದು, ಒಂದು ತಿಂಗಳ ಸಂಬಳ ಬಾಕಿ ಉಳಿಯುತ್ತಿದೆ. ಈ ಹಿನ್ನೆಲೆಯಲ್ಲಿ 14ನೇ ಹಣಕಾಸು ಆಯೋಗದ ಶೇ.10 ಹಣವನ್ನು ವೇತನಕ್ಕೆ ಬಳಸಲು ಅವಕಾಶ ಮಾಡಿಕೊಡಲಾಗಿದೆ. ಆದರೆ, ಪ್ರತಿನಿಧಿಗಳ ಒತ್ತಡಕ್ಕೆ ಮಣಿದ ಅಧಿಕಾರಿಗಳು ಸಿಬ್ಬಂದಿಗೆ ಶೇ.10 ರಡಿ ಸಂಬಳ ಕೊಡುತ್ತಿಲ್ಲ. 2019-20 ನೇ ಸಾಲಿನಲ್ಲಿ ಸಿಬ್ಬಂದಿಗೆ ಐದು ತಿಂಗಳ ವೇತನ ಬಾಕಿ ಇದೆ ಎಂದು ತಿಳಿಸಿದರು.
ಇಎಫ್‌ಎಂಎಸ್‌ಗೆ ಬಾಕಿ ಸಿಬ್ಬಂದಿ ಸೇರಿಸಬೇಕು. ಪದೋನ್ನತಿ ಮಿತಿ ಹೆಚ್ಚಿಸಬೇಕು. ಪಿಂಚಣಿ, ಗ್ರಾಚ್ಯುಟಿ ಮತ್ತಿತ ಸೌಕರ್ಯಗಳನ್ನು ಒದಗಿಸಬೇಕೆಂದು ಆಗ್ರಹಿಸಿದರು.
ಗ್ರಾಪಂ ನೌಕರ ಸಂಘದ ಸಂಚಾಲಕ ಡಿ.ಎಂ.ಮಲಿಯಪ್ಪ, ಮುಖಂಡರಾದ ಓ.ಮಾರಪ್ಪ, ಓ.ಶಶಿಕುಮಾರ್, ಪಾಪಣ್ಣ, ಸನಾವುಲ್ಲಾ, ಮಹೇಶ, ಉಮೇಶ್ ಮತ್ತಿತರರು ಉಪಸ್ಥಿತರಿದ್ದರು.