

ಚಿತ್ರದುರ್ಗ: ಎಸ್‌ಆರ್‌ಎಸ್ ವಿದ್ಯಾಸಂಸ್ಥೆ ಆವರಣದಲ್ಲಿ ಶುಕ್ರವಾರ ಬ್ಲೂ ಜೆಮ್ಸ್ ಮಾಂಟೆಸ್ಸರಿ ಯುಕೆಜಿ ಚಿಣ್ಣರ ಗ್ರಾಜ್ಯುಯೇಷನ್ ಡೇ ಶುಕ್ರವಾರ ಸಂಭ್ರಮದಿಂದ ಜರುಗಿತು.
ಕಾರ್ಯಕ್ರಮ ಉದ್ಘಾಟಿಸಿದ ಸಂಸ್ಥೆ ಕಾರ್ಯದರ್ಶಿ ಸುಜಾತಾ ಲಿಂಗಾರೆಡ್ಡಿ ಮಾತನಾಡಿ, ದೈನಂದಿನ ಜೀವನ ಜಂಜಾಟಗಳ ನಡುವೆ, ಮಕ್ಕಳ ಆರೋಗ್ಯ-ಶೈಕ್ಷಣಿಕ ಬೆಳವಣಿಗೆ ಪಾಲಕ, ಪೋಷಕರು ಖುದ್ದು ಆಸಕ್ತಿ ವಹಿಸಬೇಕು ಎಂದರು.
ಮೊಬೈಲ್ ತೊರೆದು ಕೆಲ ಹೊತ್ತು ನೆಮ್ಮದಿಯಿಂದ, ಮಕ್ಕಳ ಬಾಲ್ಯ ಜೀವನದ ಸವಿ ಅನುಭವಿಸಿ. ಅವರ ನಿಮ್ಮ ನಡುವಿನ ಭಾವನಾತ್ಮಕ ಸಂಬಂಧವನ್ನು ಗಟ್ಟಿಗೊಳಿಸಿಕೊಳ್ಳಿ. ಮಕ್ಕಳಿಗೆ ಆಸ್ತಿ ಮಾಡುವ ಬದಲು ಅವರನ್ನೇ ಸಮಾಜದ ಆಸ್ತಿಯನ್ನಾಗಿ ಮಾಡಿ ಎಂದು ಪಾಲಕರಿಗೆ ಸಲಹೆ ನೀಡಿದರು.
ವಿಜಯವಾಣಿ ಮುಖ್ಯಉಪಸಂಪಾದಕ ಹರ್ಷ ಎನ್.ಪುರೋಹಿತ ಮಾತನಾಡಿ, ನಾಲ್ಕಾರು ವರ್ಷ ವಯಸ್ಸಿನ ಈ ಮಕ್ಕಳ ದೈಹಿಕ ಆರೋಗ್ಯದೆಡೆ ಪಾಲಕರು ಅತ್ಯಂತ ಗಮನ ಹರಿಸಬೇಕು. ತಿಂದುಂಡು ಆರೋಗ್ಯವಂತರಾಗಿ ಬೆಳೆದರೆ ಅವರ ಶೈಕ್ಷಣಿಕ ಪ್ರಗತಿ ಚೆನ್ನಾಗಿರುತ್ತದೆ. ಅವರಲ್ಲಿ ಜ್ಞಾನದ ಹಸಿವು ಹೆಚ್ಚಾಗಲು ಕಾರಣವಾಗುತ್ತದೆ. ಮಕ್ಕಳ ಆರೋಗ್ಯದೆಡೆ ಗಮನ ಹರಿಸದೆ, ಮನಸೋಇಚ್ಛೆ ಅವರಿಗೆ ಜಂಕ್‌ಫುಡ್ ಕೊಡುವುದು ಸಲ್ಲದು ಎಂದು ಹೇಳಿದರು.
ಪ್ರಾಂಶುಪಾಲ ಎ.ಎಸ್.ಪ್ರಭಾಕರ್, ನಿಮ್ಮ ಮಕ್ಕಳಿಗೆ ಸಮಯವನ್ನು ಕೊಡಲಾದರೂ ಮೊಬೈಲ್ ಬಳಕೆಗೆ ನಿರ್ಬಂಧ ವಿಧಿಸಿಕೊಳ್ಳಿ. ಎಲ್‌ಕೆಜಿ, ಯುಕೆಜಿಯಿಂದ 7ನೇ ತರಗತಿವರೆಗೆ ಅಂಕಗಳ ಬಗ್ಗೆ ಪಾಲಕರು ಖಂಡಿತಾ ಆತಂಕ ಪಡೆದುಕೊಳ್ಳಬಾರದು. ಈ ವಯಸ್ಸಿನಲ್ಲಿ ಅವರು ಆಟೋಟಗಳಲ್ಲಿ ಕಾಲ ಕಳೆಯುವುದನ್ನು ಆಕ್ಷೇಪಿಸದೇ, ಅವರ ಆರೋಗ್ಯದೆಡೆ ಸೂಕ್ತ ಗಮನ ಕೊಡಬೇಕು ಎಂದರು.
ಮೊಬೈಲ್ ಬಳಕೆಗೆ ಕಡಿವಾಣ ಹಾಕಿಕೊಳ್ಳುವ ನಿಟ್ಟಿನಲ್ಲಿ ಪಾಲಕರಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. 90 ಚಿಣ್ಣರಿಗೆ ಗ್ರಾಜ್ಯುಯೇಷನ್ ಸರ್ಟಿಫಿಕೇಟ್‌ಗಳನ್ನು ವಿತರಿಸಲಾಯಿತು.
ವಿಜಯವಾಣಿ ವಿಶೇಷ ವರದಿಗಾರ ಡಿಪಿಎನ್ ಶ್ರೇಷ್ಠಿ, ಉಪ ಪ್ರಾಂಶುಪಾಲರಾದ ಅರ್ಪಿತಾ, ಪದ್ಮಾವತಮ್ಮ, ಶಿಕ್ಷಕಿಯರಾದ ಶಾಂತಾ, ಗೀತಾ, ಕವಿತಾ, ಭವ್ಯಾ, ಸುಷ್ಮಾ, ಫರೀನ್, ಶಿಲ್ಪಾ, ಪೂರ್ಣಿಮಾ, ತೇಜಸ್ವಿನಿ ಇತರರಿದ್ದರು.