ಒಬ್ಬ ನಾರಿ ನೂರು ಶಿಕ್ಷಕರಿಗೆ ಸಮ

CTD 11 muruga 2 (2)
Published on

ಚಿತ್ರದುರ್ಗ: ಶರಣತತ್ತ್ವ ಸ್ತ್ರೀ-ಪುರುಷರಲ್ಲಿ ವ್ಯತ್ಯಾಸ ಕಾಣದು, ಪುರುಷ ಹೊಂದಿರುವಷ್ಟೇ ಸ್ಥಾನಮಾನ ಮಹಿಳೆಯರಿಗೆ ಇದೆ ಎಂದು ಶ್ರೀ ಶಿವಮೂರ್ತಿ ಶರಣರು ಹೇಳಿದರು.

ಮುರುಘಾ ಮಠದಲ್ಲಿ ಬುಧವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಾನ್ನಿಧ್ಯ ವಹಿಸಿ ಮಾತನಾಡಿ, ಒಬ್ಬ ಮಹಿಳೆ ನೂರು ಶಿಕ್ಷಕರಿಗೆ ಸಮಾನ ಎಂದು ಅಭಿಪ್ರಾಯಪಟ್ಟರು.

ಮಹಿಳೆಯರಿಗೆ ಶೇ.33 ಮೀಸಲು ಇನ್ನೂ ಜಾರಿಯಾಗಿಲ್ಲ. ಶ್ರೀಮಠ ಶೇ.45 ಪ್ರಮಾಣದಲ್ಲಿ ಹೆಣ್ಣುಮಕ್ಕಳಿಗೆ ಉದ್ಯೋಗದಲ್ಲಿ ಅವಕಾಶ ಮಾಡಿಕೊಟ್ಟಿದ್ದು, ಬಸವಣ್ಣನ ತತ್ತ್ವ ಸಿದ್ಧಾಂತಗಳನ್ನು ಇಲ್ಲಿ ಯಥಾವತ್ತಾಗಿ ಪಾಲಿಸಲಾಗುತ್ತಿದೆ. ಮಹಿಳೆಯರು ಪುರುಷರಿಗಿಂತ ಹೆಚ್ಚು ಕಷ್ಟಪಟ್ಟು ದುಡಿಯುತ್ತಿದ್ದಾರೆ ಎಂದರು.

ಮನೆಯೊಳಗೆ ಸ್ತ್ರೀ ಸುರಕ್ಷಿತಳೇ? ಕೈ ಹಿಡಿದವರು ಅನುಕಂಪದಿಂದ ನೋಡಿಕೊಳ್ಳುತ್ತಾರೆಯೇ ಎಂಬ ಪ್ರಶ್ನೆ ಸಹಜ. ಅನೇಕ ಮಹಿಳೆಯ ರು ಮಾನಸಿಕ ಕಿರುಕುಳ, ಹಿಂಸೆ ಅನುಭವಿಸುತ್ತಿದ್ದಾರೆಂದು ಆತಂಕ ವ್ಯಕ್ತಪಡಿಸಿದರು.

ಯಾರು ವೈಭದ ಬದುಕನ್ನು ನಡೆಸಬೇಕೆಂದು ಹೊರಟಿರುತ್ತಾರೊ ಅಂಥವರ ಭ್ರಮೆಯನ್ನು ನಿಸರ್ಗ ಮುರಿಯುತ್ತದೆ, ದುರಂಹಕಾರ ಅಡಗಿಸುವ ಶಕ್ತಿ ಪ್ರಕೃತಿಗೆ ಇದೆ ಎಂದರು.

ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧಾ ಮಾತನಾಡಿ, ಮಹಿಳೆಯರನ್ನು ಕ್ಷಮಯಾಧರಿತ್ರಿ ಎನ್ನುತ್ತಾರೆ. ತಾಯಿ ಎನ್ನುವ ಪದವೇ ದೊಡ್ಡದು. ಎಲ್ಲ ತಪ್ಪುಗಳನ್ನು ಕ್ಷಮಿಸುವ ಶಕ್ತಿ ಹೆಣ್ಣಿಗಿದೆ ಎಂದು ತಿಳಿಸಿದರು.

ಎಸ್‌ಪಿ ಜಿ.ರಾಧಿಕಾ ಮಾತನಾಡಿ, ಜ್ಞಾನ ನಮ್ಮಲ್ಲಿದ್ದರೆ ಯಾವುದೇ ತೊಂದರೆ ಆಗದು. ಜೀವನದಲ್ಲಿ ಸಾಧಿಸುವ ಗುರಿ ಇರಬೇಕು. ಯಾವುದೇ ಕೆಲಸ ಮಾಡುವಾಗ ಚಿಂತನೆ ಅಗತ್ಯ ಎಂದರು.

ಅಂಗವಿಕಲ ಕಲ್ಯಾಣಾ ಇಲಾಖೆ ಜಿಲ್ಲಾ ಅಧಿಕಾರಿ ಜಿ.ವೈಶಾಲಿ ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣನವರು ಮಹಿಳಾ ಸಮಾನತೆಗೆ ಬುನಾದಿ ಹಾಕಿದರು. ಅಕ್ಕ ಮಹಾದೇವಿ, ಆಯ್ದಕ್ಕಿ ಲಕ್ಕಮ್ಮ, ಅಮುಗೆ ರಾಯಮ್ಮ ಮೊದಲಾದವರು ಸಮಾನತೆಗಾಗಿ ಹೋರಾಟ ನಡೆಸಿದ್ದರು ಎಂದರು.

ಎಸ್‌ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ.ಪರಮಶಿವಯ್ಯ, ನಿರ್ದೇಶಕಿ ರುದ್ರಾಣಿ ಗಂಗಾಧರ್, ಜಗದಾಂಬ ಮತ್ತಿತರರು ಇದ್ದರು.

ಎಸ್.ಜೆ.ಎಂ.ಸಮೂಹ ಸಂಸ್ಥೆಗಳ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಜಮುರಾ ಕಲಾವಿದರು ಪ್ರಾರ್ಥಿಸಿದರು. ವಿಜಯಲಕ್ಷ್ಮೀ ಹಿರೇಮಠ ಸ್ವಾಗತಿಸಿದರು. ವನಿತಾ ಶಂಕರಮೂರ್ತಿ ವಂದಿಸಿದರು. ಜಿ.ಎನ್.ರೂಪಾ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net