

ಚಿತ್ರದುರ್ಗ: ಸರ್ಕಾರದ ಮಾರ್ಗಸೂಚಿಯಂತೆ ಏ.20ರಿಂದ ಗ್ರಾಮೀಣ ಉದ್ಯೋಗ, ಸಣ್ಣ ಕೈಗಾರಿಕೆ ಸಹಿತ ವಿವಿಧ ಉದ್ಯಮಗಳ ಪ್ರಾರಂಭಕ್ಕೆ ಅನುಮತಿ ಕೊಡಲಾಗಿದೆ ಎಂದು ಡಿಸಿ ಆರ್.ವಿನೋತ್ ಪ್ರಿಯಾ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಮಗಾರಿಗಳಿಗೆ ಅನುಮತಿ ನೀಡಲಾಗಿದೆ. ಆದರೆ, ಲಾಕ್‌ಡೌನ್ ಮೇ 3ರ ವರೆಗೆ ಮುಂದುವರಿಯಲಿದೆ. ಉಲ್ಲಂಘಿಸಿದರೆ ಕ್ರಮ ಖಚಿತ ಎಂದು ಎಚ್ಚರಿಸಿದರು.
ಈವರೆಗೆ ವರದಿಯಾಗಿದ್ದ ಒಂದೇ ಪಾಸಿಟೀವ್ ಪ್ರಕರಣದ ವ್ಯಕ್ತಿಯೂ ಸಂಪೂರ್ಣ ಗುಣಮುಖರಾಗಿದ್ದಾರೆ. ಜ್ವರ ಮತ್ತಿತರ ರೋಗ ಲಕ್ಷಣಗಳಿರುವವರ ಗಂಟಲು ದ್ರವ ಮತ್ತು ರಕ್ತ ತಪಾಸಣೆ ಮಾಡಲಾಗುತ್ತಿದೆ. ಜಿಲ್ಲೆಯ ಆಂಧ್ರದ ಗಡಿ ಪ್ರದೇಶ ಬಫರ್ ಜೋನ್ ಎಂದು ಪರಿಗಣಿಸಿ ತೀವ್ರ ಎಚ್ಚರಿಕೆ ವಹಿಸಲಾಗಿದೆ. ಯಾರಿಗೂ ಆತಂಕ ಬೇಡ. ಆದರೆ, ಮುಂದಿನ 15 ದಿನಗಳ ಕಾಲ ಜಿಲ್ಲೆಗೆ ಅತ್ಯಂತ ಮಹತ್ವದ್ದಾಗಿದೆ. ನಗರದಲ್ಲಿ ಕೋವಿಡ್ ಆಸ್ಪತ್ರೆ ಸಜ್ಜಾಗಿದ್ದು, ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಜಿಲ್ಲಾಡಳಿತ ಸಿದ್ಧವಾಗಿದೆ ಎಂದರು.
ಸಾರ್ವಜನಿಕ ಸಾರಿಗೆ, ಸಿನಿಮಾ ಮಂದಿರ, ಶಾಪಿಂಗ್ ಕಾಂಪ್ಲೆಕ್ಸ್, ಜಿಮ್, ಕ್ರೀಡಾ ಚಟುವಟಿಕೆ, ಈಜುಕೊಳ, ಮದ್ಯ ಮಾರಾಟ, ಸಮಾರಂಭಗಳ ಮೇಲಿನ ನಿರ್ಬಂಧ ಮೇ 3ರ ವರೆಗೂ ಮುಂದುವರಿಯಲಿದೆ. ಗ್ರಾಮೀಣ ಪ್ರದೇಶಗಳ ಕೈಗಾರಿಕೆಗಳು, ಕಟ್ಟಡ ನಿರ್ಮಾಣ ಕಾಮಗಾರಿ ಹಿನ್ನೆಲೆಯಲ್ಲಿ ಮರಳು, ಕಲ್ಲು, ಇಟ್ಟಿಗೆ ಸಾಗಾಟಕ್ಕೆ ನಿರ್ಬಂಧವಿಲ್ಲ ಎಂದು ತಿಳಿಸಿದರು.
ಸಾರ್ವಜನಿಕ ಆಸ್ಪತ್ರೆ, ನರ್ಸಿಂಗ್ ಹೋಂ, ಪಶು ಆಸ್ಪತ್ರೆಗಳು ತೆರೆದಿದ್ದು, ಔಷಧ ಪೂರೈಕೆ ಇರುತ್ತದೆ. ಕೃಷಿ ಚಟುವಟಿಕೆಗಳಿರುತ್ತವೆ. ಎಪಿಎಂಸಿ, ಕೃಷಿ ಯಂತ್ರೋಪಕರಣ ಹಾಗೂ ಬಿಡಿಭಾಗಗಳ ಮಾರಾಟ ಮಳಿಗೆ, ಸೇವಾ ಕೇಂದ್ರಗಳು, ಬಿತ್ತನೆ ಬೀಜ, ರಸಗೊಬ್ಬರ ಮಾರಾಟ, ಮೀನುಗಾರಿಕೆ, ಉದ್ಯೋಗ ಖಾತ್ರಿ, ಎಲೆಕ್ಟ್ರಿಷಿಯನ್, ಐಟಿ ರಿಪೇರಿ, ಪ್ಲಂಬರ್ಸ್, ಮೋಟಾರ್ ಮೆಕ್ಯಾನಿಕ್ಸ್ ಮತ್ತು ಕಾರ್ಪೆಂಟರ್ಸ್ ಕೆಲಸಗಳಿಗೆ ಅನುಮತಿ ಇದೆ.
ಎಲ್ಲ ಸರಕು ಸಾಗಾಣಿಕೆ ವಾಹನಗಳ ಸಂಚಾರಕ್ಕೆ ಅವಕಾಶವಿದೆ. ಗ್ಯಾರೇಜ್ ಆರಂಭಕ್ಕೆ ಹಾಗೂ ಹೆದ್ದಾರಿಗಳ ಡಾಬಾಗಳಲ್ಲಿ ಆಹಾರ ಪಾರ್ಸೆಲ್‌ಗೆ ಅವಕಾಶವಿದೆ. ಅಗತ್ಯ ವಸ್ತುಗಳ ಸಾಗಾಣಿಕೆ, ಇ-ಕಾಮರ್ಸ್ ಕಂಪನಿಗಳಿಂದ ಆನ್‌ಲೈನ್ ಮೂಲಕ ವಸ್ತುಗಳ ಡೆಲಿವರಿ, ಕಿರಾಣಿ ಅಂಗಡಿಗಳು, ಹಣ್ಣು, ತರಕಾರಿ ಡೈರಿ ಮತ್ತು ಹಾಲಿನ ಬೂತ್‌ಗಳು ಸಮಯದ ಮಿತಿಯಿಲ್ಲದೆ ವ್ಯವಹಾರ ನಡೆಸಬಹುದು. ಕೋರಿಯರ್ ಸರ್ವೀಸ್, ಕೋಲ್ಡ್ ಸ್ಟೋರೇಜ್, ವೇರ್‌ಹೌಸ್ ಸೇವೆ, ಖಾಸಗಿ ಸೆಕ್ಯುರಿಟಿ ಸೇವೆ ಒದಗಿಸಬಹುದು.
ಹೋಟೆಲ್, ಹೋಮ್‌ಸ್ಟೇ, ಲಾಡ್ಜ್‌ನವರು ಲಾಕ್‌ಡೌನ್‌ನಿಂದಾಗಿ ಉಳಿದುಕೊಂಡಿರುವವರಿಗೆ ಮಾತ್ರ ಸೇವೆ ಒದಗಿಸಬಹುದು. ಮುನಿಸಿಪಾಲಿಟಿ ವ್ಯಾಪ್ತಿಯ ಹೊರ ಪ್ರದೇಶದಲ್ಲಿ ರಸ್ತೆ ನಿರ್ಮಾಣ, ನೀರಾವರಿ ಯೋಜನೆ, ಕಟ್ಟಡಗಳು ಮತ್ತು ಇಂಡಸ್ಟ್ರಿಯಲ್ ಯೋಜನೆ, ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳ ಕಾರ್ಯ ನಿರ್ವಹಣೆಗೆ ಅನುಮತಿ ಇದೆ ಎಂದು ತಿಳಿಸಿದರು.
ಎಸ್ಪಿ ಜಿ.ರಾಧಿಕಾ, ಎಎಸ್ಪಿ ಎಂ.ಬಿ.ನಂದಗಾವಿ, ಡಿಎಚ್‌ಒ ಡಾ.ಪಾಲಾಕ್ಷ ಮತ್ತಿತರರು ಇದ್ದರು.
ಸಾವಿರಕ್ಕೇರಿದ ಬಂಧನ ಸಂಖ್ಯೆ: ಲಾಕ್‌ಡೌನ್ ನಿಯಮ ಉಲ್ಲಂಘಿಸಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಇದುವರೆಗೂ 379 ಪ್ರಕರಣ ದಾಖಲಿಸಿ, 1016 ಜನರನ್ನು ಬಂಧಿಸಲಾಗಿದೆ ಹಾಗೂ 672 ವಾಹನಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಡಿಸಿ ತಿಳಿಸಿದರು.