ರೋಗ ತಡೆಗೆ ಯೋಗವೇ ಮದ್ದು

sunitha mallikarjun
Published on

ಚಿತ್ರದುರ್ಗ: ಶಾಲಾ-ಕಾಲೇಜುಗಳಲ್ಲಿ ಕಡ್ಡಾಯವಾಗಿ ಯೋಗ ಶಿಕ್ಷಣ ಬೋಧಿಸಬೇಕು ಎಂದು ನಗರಸಭೆ ಮಾಜಿ ಅಧ್ಯಕ್ಷೆ ಸುನಿತಾ ಮಲ್ಲಿಕಾರ್ಜುನ್ ಹೇಳಿದರು.

ನೆಹರು ಯುವ ಕೇಂದ್ರ ಇತರೆ ಸಂಘ, ಸಂಸ್ಥೆಗಳಾಶ್ರದಲ್ಲಿ ನಗರದ ಕ್ರೀಡಾಭವನದಲ್ಲಿ ಗುರುವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಯುವ ಸಮಾವೇಶ ಉದ್ಘಾಟಿಸಿ ಮಾತನಾಡಿ, ಯೋಗ ಕಲಿಕೆಯಿಂದ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದರು.

ಒತ್ತಡದಿಂದ ಕೂಡಿದ ಈ ಜೀವನದಲ್ಲಿ ನಾವೆಲ್ಲರೂ ಯಾಂತ್ರಿಕತೆ ಮಾರು ಹೋಗಿರುವುದರಿಂದ ದೈಹಿಕ ಶ್ರಮ ಕಡಿಮೆಯಾಗಿದೆ. ಆದ್ದರಿಂದಲೇ ಚಿಕ್ಕ ವಯಸ್ಸಿನಲ್ಲಿಯೇ ನಾನಾ ಕಾಯಿಲೆಗಳಿಗೆ ತುತ್ತಾಗುವಂತಾಗಿದೆ. ಇವೆಲ್ಲದ ನಿಯಂತ್ರಣಕ್ಕೆ ಯೋಗ ಮದ್ದು ಎಂದು ತಿಳಿಸಿದರು.

ಯೋಗ ಗುರು ಎಲ್.ಎಸ್.ಚಿನ್ಮಯಾನಂದ ಮಾತನಾಡಿ, ವ್ಯಾಯಾಮ ಸಧೃಢ ಆರೋಗ್ಯಕ್ಕೆ ಸೋಪಾನ. 84 ಬಗೆ ಯೋಗಾಸನಗಳಿವೆ. ಒಂದನ್ನಾದರೂ ಎಲ್ಲರೂ ತಪ್ಪದೆ ನಿತ್ಯಾಭ್ಯಾಸ ಮಾಡಬೇಕು. ಇದರಿಂದ ಚೈತನ್ಯ ಶಕ್ತಿ, ಜ್ಞಾಪಕ ಶಕ್ತಿ ಹಾಗೂ ಏಕಾಗ್ರತೆ ಹೆಚ್ಚುತ್ತದೆ. ಒಳ್ಳೆಯ ಗುರುಗಳ ಬಳಿ ಹೋಗಿ ಯೋಗ ಕಲಿಯಿರಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಎಸ್‌ಬಿಐ ಲೈಫ್ ಮ್ಯಾನೇಜರ್ ಟಿ.ಯಶವಂತ್‌ಕುಮಾರ್ ಸಾಮಾಜಿಕ ಹಾಗೂ ಸಂವಹನ ಕೌಶಲ್ಯ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ಮಾತೃಶ್ರೀ ಕಲಾ, ಸಾಂಸ್ಕೃತಿಕ ಮತ್ತು ಕ್ರೀಡಾ ಯುವಕರ ಸಂಘದ ಅಧ್ಯಕ್ಷ ವಿ.ಎಲ್.ಪ್ರಶಾಂತ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವಾಲಿಬಾಲ್ ತರಬೇತುದಾರ ಮೊಹಮದ್ ಮುಹಿಬುಲ್ಲಾ, ನೆಹರು ಯುವ ಕೇಂದ್ರ ಸಮನ್ವಯಾಧಿಕಾರಿ ಎನ್.ಸುಹಾಸ್, ಮಾರ್ಗ ನೇಚರ್ ಆ್ಯಂಡ್ ಸೋಷಿಯಲ್ ಸರ್ವಿಸ್ ಅಧ್ಯಕ್ಷ ಸಿ.ಪ್ರಶಾಂತ್‌ಕುಮಾರ್, ಶ್ರೀರಾಮ ಪ್ಯಾರ ಮೆಡಿಕಲ್ ಕಾಲೇಜು ಪ್ರಾಚಾರ್ಯ ಡಿ.ಜಗದೀಶ್, ಮಾತೃಶ್ರೀ ಕೈಗಾರಿಕಾ ತರಬೇತಿ ಸಂಸ್ಥೆ ಪ್ರಾಂಶುಪಾಲ ಸಿ.ಎಂ.ಚಂದ್ರಶೇಖರ್, ವಿ.ಎಲ್.ಪ್ರವೀಣ್, ಲಕ್ಷ್ಮಕ್ಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net