

ಚಿತ್ರದುರ್ಗ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ರಾಮನವಮಿಯನ್ನು ಗುರುವಾರ ಸರಳವಾಗಿ ಆಚರಿಸಲಾಯಿತು.
ಯಾವುದೇ ದೇವಾಲಯಗಳು, ಧಾರ್ಮಿಕ ಮಂದಿರಗಳಿಗೆ ಭಕ್ತರ ಭೇಟಿಯನ್ನು ನಿಷೇಧಿಸಿದ್ದ ಕಾರಣ ಉತ್ಸವಾದಿಗಳ ಬದಲು ಸರಳ ಪೂಜೆ ನಡೆದವು.
ರಾಮ, ಆಂಜನೇಯ ದೇಗುಲಗಳಲ್ಲಿ ಮುಂಜಾನೆಯಿಂದಲೇ ಶಾಸ್ತ್ರೋಕ್ತವಾಗಿ ಪೂಜೆ ಹಾಗೂ ವಿವಿಧ ಧಾರ್ಮಿಕ ಕಾರ್ಯಗಳು ನಡೆದವು.
ಬುರುಜನಹಟ್ಟಿಯ ಕೋಟೆ ಶ್ರೀ ಆಂಜನೇಯಸ್ವಾಮಿ. ಶ್ರೀರಾಮ, ನೆಹರೂ ನಗರದ ಶ್ರೀ ವೀರಾಂಜನೇಯ ಸ್ವಾಮಿ, ಬರಗೇರಮ್ಮ ದೇವಾಲಯದ ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಲಾಯಿತು.
ಶ್ರೀ ರಕ್ಷಾ ಆಂಜನೇಯ ಸ್ವಾಮಿ, ರಂಗಯ್ಯನಬಾಗಿಲಿನ ರಾಮಮಂದಿರ, ಆಂಜನೇಯ ಸ್ವಾಮಿ, ಗಣಪತಿ ದೇಗುಲ, ಸಿದ್ದರಾಮೇಶ್ವರ ಮಠ ಆವರಣದ ರಾಮಮಂದಿರ, ಬೆಟ್ಟದ ಆಂಜನೇಯ ಸ್ವಾಮಿ, ತಮಟಕಲ್ಲು ಆಂಜನೇಯ, ಜಿಲ್ಲಾ ಕ್ರೀಡಾಂಗಣ ರಸ್ತೆಯ ಆಂಜನೇಯ, ವಾಸವಿ ಶಾಲೆ ಬಳಿ ರಾಮಮಂದಿರ, ಆಂಜನೇಯ ಸ್ವಾಮಿ, ಆನೆ ಬಾಗಿಲು ಬಳಿಯ ಆಂಜನೇಯ ಸ್ವಾಮಿಗೆ ಪೂಜೆ ನಡೆದವು.
ಲಾಕ್ ಡೌನ್ ಕಾರಣ ಸಾರ್ವಜನಿಕವಾಗಿ ಪಾನಕ, ಕೋಸಂಬರಿ ವಿತರಣೆ ಕಂಡು ಬರಲಿಲ್ಲ. ಬಹುತೇಕರು ಮನೆಯಲ್ಲೇ ರಾಮ, ಸೀತೆಗೆ ಪೂಜೆ ಸಲ್ಲಿಸಿದರು.
ಅನ್ನಸಂತರ್ಪಣೆ ರದ್ದು: ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಸಮಿತಿ ರಾಮನವಮಿ ಅಂಗವಾಗಿ ಏ.3 ರಂದು ಹಮ್ಮಿಕೊಂಡಿದ್ದ ಅನ್ನಸಂತರ್ಪಣೆ ರದ್ದುಗೊಳಿಸಿದೆ ಎಂದು ಸಮಿತಿಯ ಪ್ರಮುಖರಾದ ಡಿ.ಬಿ.ನರಸಿಂಹಪ್ಪ, ಜಯಣ್ಣ, ಲಕ್ಷ್ಮೀಕಾಂತ್ ತಿಳಿಸಿದ್ದಾರೆ.