

ಚಿತ್ರದುರ್ಗ: ನಗರ ವ್ಯಾಪ್ತಿ ಅರ್ಹ ಫಲಾನುಭವಿಗಳಿಗೆ ವಸತಿ ನಿರ್ಮಿಸಲು 50 ಎಕರೆ ಜಮೀನು ಅಗತ್ಯವಿದೆ ಎಂದು ಶಾಸಕ ಜಿಎಚ್.ತಿಪ್ಪಾರೆಡ್ಡಿ ಹೇಳಿದರು.
ಪ್ರವಾಸಿ ಮಂದಿರದಲ್ಲಿ ಶನಿವಾರ ಆಶ್ರಯ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ವಸತಿ ನಿರ್ಮಾಣಕ್ಕೆ ಅಗತ್ಯವಿರುವ ಜಮೀನನ್ನು ಹುಡುಕಿ. ರಾಜೀವ್‌ಗಾಂಧಿ ವಸತಿ ನಿಗಮಕ್ಕೆ ಅರ್ಹ 7251 ಅರ್ಹ ಫಲಾನುಭವಿಗಳ ಪಟ್ಟಿ ಕಳಿಸಿ ಎಂದು ಯೋಜನಾ ನಿರ್ದೇಶಕ ರಾಜಶೇಖರ್‌ಗೆ ಸೂಚಿಸಿದರು.
ಮೇಗಳಹಳ್ಳಿಯಲ್ಲಿ ಗುರುತಿಸಿರುವ 15 ಎಕರೆಯಲ್ಲಿ 1000 ಮನೆಗಳನ್ನು ಜಿ ಪ್ಲಸ್-2 ಮಾದರಿಯಲ್ಲಿ ನಿರ್ಮಿಸಬಹುದು ಎಂದು ಅಧಿಕಾರಿಗಳು ತಿಳಿಸಿದಾಗ, ಜಿ ಪ್ಲಸ್ 3 ಮಾದರಿಗೆ ಶಾಸಕರು ಸಲಹೆ ನೀಡಿದರು.
ಮದಕರಿಪುರದ ಬಳಿಯ 13 ಎಕರೆಯಲ್ಲಿ 8 ಅನ್ನು ಆಶ್ರಯ ಸಮಿತಿಗೆ ಮಂಜೂರು ಮಾಡುವಂತೆ ಎಸಿ ವಿ.ಪ್ರಸನ್ನಗೆ ಸೂಚಿಸಿದರು.
ಈ ಸಂಬಂಧ ಜಿಲ್ಲಾಧಿಕಾರಿ ಅವರೊಂದಿಗೆ ಚರ್ಚಿಸಬೇಕೆಂದ ಅವರು, ನಗರದ ರಸ್ತೆ ನಿರ್ಮಾಣದ ಕಾಮಗಾರಿಗಳು ಮಾರ್ಚ್‌ವೊಳಗೆ ಪೂರ್ಣವಾಗಲಿವೆ ಎಂದು ತಿಳಿಸಿದರು.
ನಗರಸಭೆ ಆಯುಕ್ತ ಜಿ.ಹನುಮಂತರಾಜು, ತಹಸೀಲ್ದಾರ್ ಜೆ.ಸಿ.ವೆಂಕಟೇಶಯ್ಯ, ಕುಡಾ ಆಯುಕ್ತ ವಿಜಯಕುಮಾರ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಮುಖ್ಯಮಂತ್ರಿ ಪರಿಹಾರ ನಿಧಿ ಚೆಕ್‌ಗಳನ್ನು ಶಾಸಕರು ಸಂಬಂಧಿಸಿದವರಿಗೆ ವಿತರಿಸಿದರು. ವೇತನ ಬಿಡುಗಡೆಗೆ ಸಹಕರಿಸಿದ ಶಾಸಕರನ್ನು ನಗರದ ತೀಕ್ಷ್ಣ ಅಂಧರ ಶಾಲೆ ಶಿಕ್ಷಕರು ಗೌರವಿಸಿದರು.