

ಚಿತ್ರದುರ್ಗ: ಘನ ತ್ಯಾಜ್ಯ ವಿಲೇವಾರಿ ಹಾಗೂ ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಬಯಲು ಶೌಚಮುಕ್ತ ದೇಶ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಮಹತ್ತರ ಹೆಜ್ಜೆಯಿಟ್ಟಿದೆ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು.
ಭೀಮಸಮುದ್ರ ಗ್ರಾಮ ಪಂಚಾಯಿತಿಯಲ್ಲಿ ಕಸ ವಿಲೇವಾರಿ ವಾಹನಕ್ಕೆ ಚಾಲನೆ ನೀಡಿ ಮಾತನಾಡಿ, ಹಳ್ಳಿಗಳು ಸ್ವಚ್ಛವಾಗಿರಬೇಕು. ಗ್ರಾಪಂ ಸದಸ್ಯರು ಹಾಗೂ ಅಧ್ಯಕ್ಷರು ಇಂತಹ ಒಳ್ಳೆಯ ಕೆಲಸ ಮಾಡುತ್ತಿರುವುದು ಮಾದರಿ ಎಂದರು.
ಇತ್ತೀಚಿನ ದಿನಗಳಲ್ಲಿ ಕೋವಿಡ್-19 ಬೇರೆ ದೇಶಗಳಲ್ಲಿ ಹೆಚ್ಚಾಗಿದೆ. ಆದರೆ, ನರೇಂದ್ರ ಮೋದಿ ಅವರು ನಮ್ಮ ದೇಶದಲ್ಲಿ ತಡೆಗಟ್ಟಲು ಯಶಸ್ವಿಯಾಗುತ್ತಿದ್ದಾರೆ. ಕರೊನಾ ವಿರುದ್ಧ ಹೋರಾಡಿದ ಗ್ರಾಪಂ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಆಸ್ಪತ್ರೆ ಸಿಬ್ಬಂದಿಗೆ ಪ್ರತಿಯೊಬ್ಬರು ಗೌರವ ಸಲ್ಲಿಸಬೇಕು ಎಂದು ತಿಳಿಸಿದರು.
ಸಂಸದ ಜಿ.ಎಂ.ಸಿದ್ದೇಶ್ವರ್ ಮಾತನಾಡಿ, ಕಸ ವಿಲೇವಾರಿಗೆ ಹಣ ಪಾವತಿ ಮಾಡದಿದ್ದಲ್ಲಿ ಗ್ರಾಪಂ ಕಂದಾಯದಲ್ಲಿ ಸೇರಿಸಿ ಹಾಗೂ ಕಂದಾಯ ಬಾಕಿ ಉಳಿಸಿಕೊಂಡವರಿಂದ ಬಡ್ಡಿ ವಸೂಲಿ ಮಾಡುವಂತೆ ಪಿಡಿಒ ಸೂಚಿಸಿದರು.
ಗ್ರಾಪಂ ಅಧ್ಯಕ್ಷ ಟಿ.ಜಿ.ಅರುಣ್ ಕುಮಾರ್ ಮಾತನಾಡಿ, ಕಸ ವಿಲೇವಾರಿ ಮಾಡಲು ಜಾನ್ ಮೈನ್ಸ್ ಸಂಸ್ಥೆ ವಾಹನವನ್ನು ಕೊಡುಗೆಯಾಗಿ ನೀಡಿದೆ. ಜನರು ಕಸ ವಿಲೇವಾರಿ ವಾಹನದಲ್ಲಿ ಕಸ ಹಾಕಬೇಕು ಎಂದರು.
ಜಾನ್ಸ್ ಮೈನ್ಸ್ ಮಾಲೀಕ ಪ್ರವೀಣ್ ಚಂದ್ರ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಚ್.ಕೃಷ್ಣನಾಯ್ಕ, ಜಾನ್ ಮೈನ್ಸ್ ವ್ಯವಸ್ಥಾಪಕರಾದ ರಣದಿವೆ, ಟಿ.ಜಿ ಮಲ್ಲಿಕಾರ್ಜುನ್, ಶರತ್ ಪಟೇಲ್ ಇದ್ದರು.