ಕೈ, ಎಡ ಪಕ್ಷಗಳ ಮಾತು ಕೇಳಬೇಡಿ

CTD 9 BJP
Published on

ಚಿತ್ರದುರ್ಗ: ಸಿಎಎ ವಿರುದ್ಧ ಅಪ್ರಚಾರ ಮಾಡುತ್ತಿರುವ ಕಾಂಗ್ರೆಸ್ ಮತ್ತು ಎಡಪಕ್ಷಗಳ ವಿರುದ್ಧ ಎಚ್ಚರ ವಹಿಸುವಂತೆ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮುಸ್ಲಿಮರಲ್ಲಿ ಮನವಿ ಮಾಡಿದರು.

ನಗರದ ಶಾರದಮ್ಮ ರುದ್ರಪ್ಪ ಕಲ್ಯಾಣ ಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ಚಿತ್ರದುರ್ಗ ನಗರ, ಗ್ರಾಮಾಂತರ ಬಿಜೆಪಿ ಮಂಡಲ ಅಧ್ಯಕ್ಷರ ಪದಗ್ರಹಣ ಹಾಗೂ ಸಿಎಎ ಪರ ಜಾಗೃತಿ ಅಭಿಯಾನ ಉದ್ಘಾಟಿಸಿ ಮಾತನಾಡಿ, ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ವಿರುದ್ಧ ದೇಶದಲ್ಲಿ ಅಪಪ್ರಚಾರ ನಡೆಯುತ್ತಿದೆ ಎಂದು ದೂರಿದರು.

ಕಾಂಗ್ರೆಸ್, ಎಡಪಕ್ಷಗಳು ದೇಶದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿವೆ. ಆಫ್ಘಾನಿಸ್ತಾನ, ಪಾಕಿಸ್ತಾನ, ಬಾಂಗ್ಲಾದಿಂದ ನಮ್ಮ ದೇಶಕ್ಕೆ ಬಂದಿರುವ ಹಿಂದು, ಸಿಖ್, ಪಾರ್ಸಿ, ಜೈನ್ ಹಾಗೂ ಬೌದ್ಧ ನಿರಾಶ್ರಿತರಿಗೆ ಪೌರತ್ವ ಕೊಡುವುದು ಕಾಯ್ದೆ ಉದ್ದೇಶವೇ ಹೊರತು ಯಾರ ಪೌರತ್ವವನ್ನು ಕಿತ್ತು ಕೊಳ್ಳುವುದಲ್ಲ ಎಂದು ತಿಳಿಸಿದರು.

ಕೇವಲ ಓಟಿಗಾಗಿ ಕಾಂಗ್ರೆಸ್ ನಡೆಸುತ್ತಿರುವ ಅಪಪ್ರಚಾರಕ್ಕೆ ಯಾರೂ ಕಿವಿಗೊಡಬಾರದು. ಬಿಜೆಪಿಯಿಂದಾಗಿ ದೇಶದ ಆರ್ಥಿಕ ಪರಿಸ್ಥಿತಿ ಕುಸಿದಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಕಲ್ಲಿದ್ದಲು, ಕಾಮನ್‌ವೆಲ್ತ್ ಕ್ರೀಡೆ ಮೊದಲಾದ ಲಕ್ಷಾಂತರ ಕೋಟಿ ರೂ. ಮೊತ್ತದ ಹಗರಣಗಳಿಗೆ ಕಾರಣವಾಗಿರುವ ಕಾಂಗ್ರೆಸ್ ಪಕ್ಷ ಟೀಕಿಸುವ ನೈತಿಕತೆ ಕಳೆದುಕೊಂಡಿದೆ ಎಂದರು.

ಪಕ್ಷದ ಪ್ರಭಾರಿ ಜಿ.ಎಂ.ಸುರೇಶ್ ಮಾತನಾಡಿ, ನೂತನ ಅಧ್ಯಕ್ಷರು ಸಿಎಎ ಮಹತ್ವದ ಕುರಿತಂತೆ ನಿರಂತರ ಕಾರ್ಯಕ್ರಮ ಆಯೋಜಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.

ನಗರ ಅಧ್ಯಕ್ಷರಾಗಿ ಶಶಿಕುಮಾರ್ ಹಾಗೂ ಗ್ರಾಮಾಂತರ ಮಂಡಲ ಅಧ್ಯಕ್ಷರಾಗಿ ನಂದಿ ನಾಗರಾಜ್ ಅಧಿಕಾರ ಸ್ವೀಕರಿಸಿದರು. ಪೌರತ್ವ ತಿದ್ದುಪಡಿ ಅಭಿಯಾನ ಮುಖಂಡರಾದ ಎ.ಮುರಳಿ, ಸಿದ್ದೇಶ್‌ಯಾದವ್ ಮಾತನಾಡಿದರು.

ಜಿಪಂ ಸದಸ್ಯ ಗುರುಮೂರ್ತಿ, ಮುಖಂಡರಾದ ಮಲ್ಲಿಕಾರ್ಜುನ್, ಟಿ.ಬದ್ರಿನಾಥ್, ತಿಪ್ಪೇಸ್ವಾಮಿ, ನಾಗರಾಜ್ ಬೇದ್ರೆ, ದಗ್ಗೆ ಶಿವಪ್ರಕಾಶ್, ಸಂಪತ್‌ಕುಮಾರ್, ಡಿ.ರಮೇಶ್, ಎಂ.ಪಿ.ಗುರುರಾಜ್, ಕಲ್ಲೇಶಯ್ಯ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net