ಮೇ 3ರ ಬಳಿಕವೂ ಇರಲಿ ಲಾಕ್‌ಡೌನ್

CTD 23 MINISTER MP (2)
Published on

ಚಿತ್ರದುರ್ಗ: ಕರೊನಾ ನಿವಾರಿಸಲು ಮೇ 3ರ ನಂತರವೂ ಲಾಕ್‌ಡೌನ್ ಮುಂದುವರಿಸುವ ಅಗತ್ಯವಿದೆ ಎಂದು ಜನಸಂಪನ್ಮೂಲ ಸಚಿವ ರಮೇಶ್ ಜಾರಕಿ ಹೊಳಿ ಅಭಿಪ್ರಾಯಪಟ್ಟರು.

ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಸಂಸದರು ಆಯೋಜಿಸಿರುವ ಅನ್ನದಾಸೋಹ ಕೇಂದ್ರಕ್ಕೆ ಗುರುವಾರ ಭೇಟಿ ನೀಡಿದ ವೇಳೆ ಮಾತನಾಡಿ, ಜನರು ಲಾಕ್‌ಡೌನ್‌ನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಬೇಸರಿಸಿದರು.

ಮೇ 3ರ ನಂತರ ಲಾಕ್‌ಡೌನ್ ಮುಂದುವರಿಕೆ ಕುರಿತು ಪ್ರದಾನಿ ಮೋದಿ ಹಾಗೂ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಕೈಗೊಳ್ಳುವ ನಿರ್ಣಯ ಅತ್ಯಂತ ಮಹತ್ವದ್ದಾಗಿರಲಿದೆ. ವೈಯ ಕ್ತಿಕವಾಗಿ ಹೇಳುವುದಾದರೆ ಲಾಕ್‌ಡೌನ್ ಮುಂದುವರಿಸಬೇಕು ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರು ಕೈಗೊಂಡ ದಿಟ್ಟ ನಿರ್ಧಾರಗಳಿಂದಾಗಿಯೇ ಸೋಂಕು ನಿಯಂತ್ರಣಕ್ಕೆ ಬಂದಿದೆ ಎಂದು ತಿಳಿಸಿದರು.

ಲಾಕ್‌ಡೌನ್ ನಿಯಮಗಳ ಅನುಷ್ಠಾನಕ್ಕೆ ಸರ್ಕಾರ ಪೊಲೀಸರಿಗೆ ಅಧಿಕಾರ ಕೊಟ್ಟಿದೆ ಬೆಳಗಾವಿ ಜಿಲ್ಲೆಯಲ್ಲಿ ಸಾಕಷ್ಟು ಟೈಟ್ ಮಾಡಲಾಗಿದೆ. ಸ್ಥಳೀಯ ನಾಯಕರ ಸಹಕಾರವೂ ಪೊಲೀಸರಿಗೆ ಅಗತ್ಯವಿದೆ ಎಂದರು.

ಸಂಸದ ಎ.ನಾರಾಯಣಸ್ವಾಮಿ, ಶಾಸಕ ಮಹೇಶ್ ಕುಮಟಳ್ಳಿ, ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ವಿಭಾಗೀಯ ಪ್ರಭಾರಿ ಜಿ.ಎಂ.ಸುರೇಶ್, ಎಂ.ಎ.ಸೇತೂರಾಂ, ಕೆ.ಶಿವಣ್ಣಾಚಾರ್, ನಂದಿ ನಾಗರಾಜ್, ಡಾ.ಬಿ.ತಿಪ್ಪೇಸ್ವಾಮಿ, ಸಂಪತ್‌ಕುಮಾರ್, ವಿಶ್ವನಾಥ್, ಸೂರನಹಳ್ಳಿ ಶ್ರೀನಿವಾಸ್, ರಾಂದಾಸ್, ನಾಗರಾಜ್ ಬೇಂದ್ರೆ, ಮೋಹನ್, ಹನುಮಂತಪ್ಪ ದುರ್ಗ, ತಿಪ್ಪೇಸ್ವಾಮಿ, ನಂದೀಶ್, ಎಸ್ಪಿ ಜಿ.ರಾಧಿಕಾ, ಡಿವೈಎಸ್ಪಿ ಪಾಂಡುರಂಗ, ಪಿಐಗಳಾದ ಪ್ರಕಾಶ್, ನಯೀಂ ಅಹಮದ್ ಮತ್ತಿತರರು ಇದ್ದರು.

ಹಸಿದ ಹೊಟ್ಟೆಯಲ್ಲಿ ಕಾದರು: ಸಚಿವರ ಬರುವಿಕೆ ಹಿನ್ನೆಲೆಯಲ್ಲಿ ಅನ್ನದಾಸೋಹ ಕೇಂದ್ರದಲ್ಲಿ ಸೇರಿದ್ದ ನೂರಾರು ಬಡವರು ಊಟಕ್ಕಾಗಿ ಎರಡು ತಾಸಿಗೂ ಅಧಿಕ ಕಾಲ ಕಾಯುವಂತಾಯಿತು. ಸಚಿವರು ಹಾಗೂ ಸಂಸದರು ಬಂದು ಬಡಿಸುವವರೆಗೂ ಜನರು ಹಸಿದ ಹೊಟ್ಟೆಯಲ್ಲಿ ಊಟಕ್ಕೆ ಸರತಿಯ ಲ್ಲಿ ಕಾಯಬೇಕಾಯಿತು.

ಸಾಮಾಜಿಕ ಅಂತರ ಕಣ್ಮರೆ: ಸಂಸದರ ಅನ್ನದಾಸೋಹ ಕೇಂದ್ರದಲ್ಲಿ ಸಚಿವರು ಊಟ ಬಡಿಸುವಾಗ ಸಾಮಾಜಿಕ ಅಂತರದ ಕೊರತೆ ಕಂಡುಬಂತು. ಮೂರ‌್ನಾಲ್ಕು ಪೊಲೀಸ್ ಅಧಿಕಾರಿಗಳು ಪದೇ ಪದೆ ಮೆಗಾಫೋನ್‌ನಲ್ಲಿ ಅಂತರ ಕಾಪಾಡಿಕೊಳ್ಳಬೇಕು ಎಂಬ ಮನವಿ ಗಣ್ಯರ ಕಿವಿಗೆ ತಲುಪಲಿಲ್ಲ. ಸಚಿವರು ಸುದ್ದಿಗಾರರ ಜತೆ ಮಾತನಾಡುವಾಗಲೂ ಪೊಲೀಸರು ಖುದ್ದು ಬಂದು ಹಲವರನ್ನು ಸರಿಸಬೇಕಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net